

ವಿರಾಜಪೇಟೆ: ವಿಶ್ವದ ಅಗ್ರ ವಿಜ್ಞಾನಿಗಳ (2025ರ ಸಮೀಕ್ಷೆ) ಪಟ್ಟಿಯಲ್ಲಿ ಡಾ.ಯು.ಟಿ.ಉತಪ್ಪ ಸ್ಥಾನ ಪಡೆದಿದ್ದಾರೆ.
ಪ್ರತಿ ವರ್ಷ ಅಮೆರಿಕದ ಸ್ಟಾೃನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರೊ.ಜಾನ್ ಪಿ.ಎ.ಇಯೋನಿಡಿಸ್ ಅವರು ಎಲ್ಸೆವಿಯರ್ ಮತ್ತು ಸ್ಕೋಪಸ್ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವದ ಅಗ್ರ 2% ವಿಜ್ಞಾನಿಗಳು ಎಂಬ ಪಟ್ಟಿ ಪ್ರಕಟಿಸುತ್ತಾರೆ. ವಿಶ್ವದಾದ್ಯಂತದ ಸುಮಾರು 2% ವಿಜ್ಞಾನಿಗಳಲ್ಲಿ ಅತ್ಯಂತ ಪ್ರಭಾವಶಾಲಿ ವಿಜ್ಞಾನಿಗಳನ್ನು ಗುರುತಿಸುವುದು ಈ ಪಟ್ಟಿಯ ಉದ್ದೇಶ. ಉಲ್ಲೇಖ ಅಂಶಗಳು ಮತ್ತು ಸಂಯುಕ್ತ ವೈಜ್ಞಾನಿಕ ಪರಿಣಾಮದ ಸೂಚ್ಯಂಕಗಳ ಆಧಾರದ ಮೇಲೆ ಪಟ್ಟಿ ಮಾಡಲ್ಪಟ್ಟಿದೆ.
ಡಾ.ಉತಪ್ಪ ಅವರು ಪ್ರಸ್ತುತ ಚೀನಾದ ಶೆನ್ಜೆನ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಮತ್ತು ಪರಿಸರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೋಸ್ಟ್-ಡಾಕ್ಟರಲ್ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ದಕ್ಷಿಣ ಕೊರಿಯಾದ ಚೋನ್ನಮ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ (2021-2022) ಪೋಸ್ಟ್-ಡಾಕ್ಟರಲ್ ಫೆಲೋ ಆಗಿ ಹಾಗೂ ಯಾಂಗ್ನಮ್ ಯುನಿವರ್ಸಿ ಟಿಯಲ್ಲಿ (2022-2023) ಸಂಶೋಧನಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಡಾ.ಉತ್ತಪ್ಪ ಅವರು ಬೆಂಗಳೂರು ನಗರದಲ್ಲಿರುವ ಜೈನ್ ವಿಶ್ವವಿದ್ಯಾಲಯದಿಂದ (2021) ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರ ಮುಖ್ಯ ಸಂಶೋಧನಾ ಕ್ಷೇತ್ರವೆಂದರೆ ಪರಿಸರ, ಆರೋಗ್ಯ, ಆಹಾರ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸ್ಥಿರತೆ ಸಾಧಿಸುವ ದಿಟ್ಟ ಗುರಿಯೊಂದಿಗೆ ಜಾಗತಿಕ ಸವಾಲುಗಳನ್ನು ಪರಿಹರಿಸುವುದಾಗಿದೆ.
ಅಂತಾರಾಷ್ಟ್ರೀಯ ಖ್ಯಾತಿ ವಿಮರ್ಶಿತ ವಿಜ್ಞಾನ ಪತ್ರಿಕೆಗಳಲ್ಲಿ ಉತ್ತಪ್ಪ ಅವರ 50 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, 2300 ಕ್ಕೂ ಹೆಚ್ಚು ಉಲ್ಲೇಖಗಳನ್ನು ಪಡೆದಿದ್ದಾರೆ. ಇದರೊಂದಿಗೆ 2 ಕೊರಿಯನ್ ಮತ್ತು 1 ಚೀನಿ ಪೇಟೆಂಟ್‌ಗಳನ್ನೂ ದಾಖಲಿಸಿದ್ದಾರೆ.ಅಪೂರ್ವ ಸಾಧಕ ಡಾ.ಉತ್ತಪ್ಪ ಅವರು ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ಉಳುವಂಗಡ ಸಾಬು ತಮ್ಮಯ್ಯ ಹಾಗೂ ಉಳುವಂಗಡ ಮೀನಾ ಅವರ ಪುತ್ರ.