

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ವತಿಯಿಂದ ಪ್ರತಿ ವರ್ಷ ಕತೆ, ಕಾದಂಬರಿಕಾರ ದಿ.ವಿಶುಕುಮಾರ್ ಗೌರವಾರ್ಥ ಪ್ರದಾನ ಮಾಡಲಾಗುವ ‘ವಿಶುಕುಮಾರ್ ಪ್ರಶಸ್ತಿ’ಗೆ ಇತಿಹಾಸ ಮತ್ತು ಜಾನಪದ ಸಂಶೋಧಕ ಡಾ.ತುಕಾರಾಮ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಯುವವಾಹಿನಿ ಕೊಲ್ಯ ಘಟಕ ಆಶ್ರಯದಲ್ಲಿ ನ.7ರಂದು ಬೆಳಗ್ಗೆ 10ಕ್ಕೆ ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ವೇಳೆ ‘ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ’ಯನ್ನು ಇಂದುಚೇತನ ಬೋರುಗುಡ್ಡೆ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ಶಶಿಧರ ಕಿನ್ನಿಮಜಲು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕೊಲ್ಯ ಸೋಮೇಶ್ವರ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ ಕೊಲ್ಯ ಉದ್ಘಾಟಿಸಲಿದ್ದು, ಶಾಸಕ ಯು.ಟಿ.ಖಾದರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಭಾಗವಹಿಸಲಿದ್ದಾರೆ. ಶಿಕ್ಷಣ ತಜ್ಞ ಮಹಾಬಲೇಶ್ವರ ಟಿ.ಹೆಬ್ಬಾರ್ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಕೊಲ್ಯ ಘಟಕ ಅಧ್ಯಕ್ಷ ಮೋಹನ್ ಮಾಡೂರು, ಪ್ರಮುಖರಾದ ಶಂಕರ ಸುವರ್ಣ, ಮುದ್ದುಮೂಡುಬೆಳ್ಳೆ ಉಪಸ್ಥಿತರಿದ್ದರು.