ಬಾಲಕಿಗೆ ಕಿರುಕುಳ ಆತ್ಮಹತ್ಯೆ, ಕಿಡಿಗೇಡಿ ಆರೋಪಿ ರಕ್ಷಿಸುತ್ತಿರುವ ಪೊಲೀಸ್​?

Dr.Sudha Halakai
Published on

ಕಲಬುರಗಿ: ಜೇವರ್ಗಿಯಲ್ಲಿ ಅನ್ಯಕೋಮಿನ ಯುವಕನ ಕಿರುಕುಳಕ್ಕೆ ಬಾಲಕಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯನ್ನು ಅಪ್ರಾಪ್ತ ಎಂದು ಬಿಂಬಿಸುತ್ತಿರುವ ಅನುಮಾನವಿದೆ. ಪೊಲೀಸರು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಗೌರವಾಧ್ಯಕ್ಷೆ ಡಾ.ಸುಧಾ ಹಾಲಕಾಯಿ ಆಕ್ಷೇಪಿಸಿದರು.

ಘಟನೆ ನಡೆದ ದಿನ ಆರೋಪಿಯ ವಯಸ್ಸು ೨೧ ಎಂದಿದ್ದ ಪೊಲೀಸರು, ಎಫ್‌ಐಆರ್‌ನಲ್ಲಿ ಆತನ ವಯಸ್ಸು ಉಲ್ಲೇಖಿಸಿಲ್ಲ. ಆದರೆ ಉದ್ಯೋಗ ಆಟೋ ಚಾಲಕ ಎಂದಿದಿದ್ದಾರೆ. ಪ್ರಸ್ತುತ ೧೬ ವರ್ಷ ಎನ್ನುತ್ತಿದ್ದಾರೆ. ೧೬ ವರ್ಷದ ಅಪ್ರಾಪ್ತ ಆಟೋ ಚಾಲಕ ಹೇಗೆ ಆಗುತ್ತಾನೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪೊಲೀಸರು ತೋರಿಸುತ್ತಿರುವ ಆತ ಸೆಂಟ್ ಜಾನ್ ಶಾಲೆಯ ದಾಖಲೆಯಲ್ಲಿ ೨೦೧೨ ಜನ್ಮದಿನದ ವರ್ಷ ಎನ್ನುತ್ತಿದ್ದಾರೆ. ಅದನ್ನು ಪರಿಗಣಿಸಿದರೆ ೧೪ ವರ್ಷವಾಗುತ್ತೆ. ಆದರೆ ಪೊಲೀಸರು ೧೬ ವರ್ಷ ಎನ್ನುತ್ತಿದ್ದಾರೆ. ಪೊಲೀಸರ ಹೇಳಿಕೆಗಳಲ್ಲಿ ಸ್ಪಷ್ಟತೆಯಿಲ್ಲ. ಪ್ರಕರಣ ನಂತರದ ದಿನವೇ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಕರೆದೊಯ್ದಿದ್ದು, ಪೊಲೀಸರಿಗೆ ಇದು ಮೊದಲೇ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದರು.

ದಂತ, ಮೂಳೆ ಪರೀಕ್ಷೆ ಆಯ್ತಾ: ವಯಸ್ಸನ್ನು ತಿಳಿಯಲು ದಂತ ಮತ್ತು ಮೂಳೆಯ ಪರಿಶೀಲನೆ ನಡೆಸಬೇಕು. ಆದರೆ ಜೇವರ್ಗಿ ಪ್ರಕರಣದಲ್ಲಿ ಪೊಲೀಸರು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಹಿಂದೆ ನಗರದ ಜಿಮ್ಸ್ನಲ್ಲಿ ಬಾಣಂತಿ ಸಾವಿನ ಪ್ರಕರಣದ ಪೋಸ್ಟ್ ಮಾರ್ಟ್ಂ ವರದಿಯನ್ನು ಸರಿಯಾಗಿ ನೀಡದೆ ಮೋಸ ಮಾಡಿದ್ದು, ಇದೀಗ ಅದನ್ನೇ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

ಜಿಲ್ಲೆಯ ಕೆಲ ಜನಪ್ರತಿನಿಧಿಗಳು ತುಷ್ಟೀಕರಣ ರಾಜಕಾರಣಕ್ಕಾಗಿ ಪ್ರಕರಣಗಳ ಬಗ್ಗೆ ಪೊಲೀಸರ ಮೇಲೆ ಒತ್ತಡ ಹೇರಿ, ತಮ್ಮ ಕೀಳು ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಪದೇ ಪದೆ ಇಂತಹ ಘಟನೆ ನಡೆದರೂ, ದೊಡ್ಡ ಮಟ್ಟದಲ್ಲಿ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ವೀರಶೈವ ಸಮಾಜದಿಂದ ನ್ಯಾಯವಾದಿಯನ್ನು ನೇಮಿಸಲಾಗುವುದು ಎಂದು ಆರೋಪಿಸಿದರು.

ರಾಜುಗೌಡ ನಾಗನಹಳ್ಳಿ, ವೀರೇಂದ್ರ ಪಾಟೀಲ್ ರಾಯಕೋಡ, ಗಿರಿರಾಜ ಯಳಮೇಲಿ, ಮಹೇಶ ಪಾಟೀಲ್ ಇದ್ದರು.

ಸಮಾಜದ ನಾಯಕರೆಲ್ಲಿ?: ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಅತಿದೊಡ್ಡ ಸಮಾಜವಾಗಿದ್ದು, ಇದೇ ಸಮಾಜದ ಮತಗಳನ್ನು ಪಡೆದು ಗೆದ್ದವರು ಮಾತನಾಡುತ್ತಿಲ್ಲ. ಸಮಾಜದವರೇ ಆದ, ಸರ್ಕಾರದ ಭಾಗವಾಗಿರುವ ಸಚಿವರಾದ ಈಶ್ವರ ಖಂಡ್ರೆ, ಡಾ.ಶರಣಪ್ರಕಾಶ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಶಾಸಕರಾದ ಬಿ.ಆರ್.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್ ಏಕೆ ಮಾತನಾಡುತ್ತಿಲ್ಲ ಎಂದು ಡಾ.ಸುಧಾ ಹಾಲಕಾಯಿ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net