ಬಾಣಂತಿ ಬದಲು ಶಿಶುವಿನ ವರದಿ ನೀಡಿದ ಜಿಮ್ಸ್

Dr.Sudha Halakai
Published on

ಕಲಬುರಗಿ: ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್) ಆಸ್ಪತ್ರೆಯಲ್ಲಿನ ಎಡವಟ್ಟುಗಳು ನಿರಂತರವಾಗಿ ನಡೆದಿದ್ದು, ವೈದ್ಯರ ನಿರ್ಲಕ್ಷÈದಿಂದ ಮೃತಪಟ್ಟಿರುವ ಬಾಣಂತಿಯ ಮರಣೋತ್ತರ ಪರೀಕ್ಷೆ (ಪಿಎಂ) ವರದಿಯನ್ನು ಕೇಳಿದರೆ, ಯಾರದ್ದೋ ಅನಾಥ ನವಜಾತ ಶಿಶುವಿನ ಪಿಎಂ ವರದಿ ನೀಡಿ ಜಿಮ್ಸ್ನವರು ಮೋಸ ಮಾಡಿದ್ದಾರೆ ಎಂದು ಬಿಜೆಪಿಯ ಬಾಣಂತಿಯರು, ನವಜಾತ ಶಿಶುಗಳ ಸಾವಿನ ಸತ್ಯಶೋಧನಾ ಸಮಿತಿ ಸದಸ್ಯೆ ಡಾ.ಸುಧಾ ಹಾಲಕಾಯಿ ಆರೋಪಿಸಿದರು.

ಡಿ.೧೭ರಂದು ಅಫಜಲಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಹೆರಿಗೆಗೆ ದಾಖಲಾಗಿದ್ದ ಭಾಗ್ಯಶ್ರೀಯೂ ವೈದ್ಯರ ನಿರ್ಲಕ್ಷÈದಿಂದ ಗಂಭೀರ ಸಮಸ್ಯೆ ಎದುರಿಸಿದ್ದರಿಂದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅಂದು ತಾಯಿ ಮೃತಪಟ್ಟಾಗಲೂ ಹಸುಗೂಸನ್ನು ಜಿಮ್ಸ್ನವರು ರಸ್ತೆಯಲ್ಲಿ ಕೂಡಿಸಿ, ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದ್ದರು. ಇದೀಗ ಅದೇ ನಿರ್ಲಕ್ಷÈ ಮುಂದುವರಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಭಾಗ್ಯಶ್ರೀಯ ಪತಿ ಬಡ ಕೂಲಿ ಕಾರ್ಮಿಕರಾಗಿದ್ದು, ಹಸುಗೂಸನ್ನು ಸಾಕುತ್ತಿದ್ದಾರೆ. ಪತ್ನಿಯ ಸಾವಿಗೆ ನ್ಯಾಯ ದೊರೆಯಬೇಕು, ಪರಿಹಾರ ಬೇಕು ಎಂದು ಜಿಮ್ಸ್ನಲ್ಲಿ ಪೋಸ್ಟ್ ಮಾರ್ಟ್ಂ ವರದಿ ಕೇಳಿದರೆ ಯಾರದ್ದೋ ಅನಾಥ ನವಜಾತ ಶಿಶುವಿನ ವರದಿ ನೀಡಿದ್ದಾರೆ. ಓದು ಬರಹ ಬರದ ಅವರು ಅದನ್ನೇ ತೆಗೆದುಕೊಂಡು ಬಂದಿದ್ದಾರೆ. ಇದರ ಹಿಂದೆ ಸಾವಿನ ಕಾರಣ, ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಇದೊಂದು ಗಂಭೀರ ಲೋಪವಾಗಿದೆ. ತನಿಖೆಯನ್ನು ಮುಚ್ಚಿ ಹಾಕುವ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಸಂಕಷ್ಟದಲ್ಲಿರುವ ಕುಟುಂಬದವರಿಗೆ ನೆರವು ನೀಡುವುದು ಬಿಟ್ಟು, ಅವರ ದಾರಿ ತಪ್ಪಿಸಲಾಗುತ್ತಿದೆ. ಸರ್ಕಾರವೇ ದಾರಿ ತಪ್ಪಿಸಿದರೆ ಪರಿಹಾರ ನೀಡುವವರು ಯಾರು?. ಕೂಡಲೇ ಸುಳ್ಳು ವರದಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಮೃತ ಬಾಣಂತಿಯ ಕುಟುಂಬಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಮೃತ ಭಾಗ್ಯಶ್ರೀಯ ಪತಿ ಶಿವಾಜಿ ಮಾತನಾಡಿ, ಪೋಸ್ಟ್ ಮಾರ್ಟ್ಂ ರಿಪೋರ್ಟ್ ಕೇಳಿದ್ರೆ ಇದೇನೋ ನೀಡಿದ್ದಾರೆ. ನಮಗೆ ಓದಲು ಬರೆಯಲು ಬರಲ್ಲ. ಪರಿಹಾರ ದೂರದ ಮಾತು, ತಪ್ಪಿತಸ್ಥರಿಗೆ ನ್ಯಾಯವೂ ಸಿಗುವಂತೆ ಕಾಣುತ್ತಿಲ್ಲ. ಯಾರನ್ನು ಕೇಳಬೇಕು ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಡಾ.ಪುಷ್ಪಾ ವಿಶ್ವನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net