ವಿಜಯದಶಮಿಗೆ ಶರಣ ತತ್ವದ ಸ್ಪರ್ಶ: ಶರಣ ಸಂಸ್ಕೃತಿ ಉತ್ಸವಕ್ಕೀಗ 30 ವರ್ಷ

Muruga Sharana
Published on

ಬಸವಾದಿ ಶರಣರ ಆಶಯದಂತೆ ಸಮ ಸಮಾಜದ ಹಣತೆ ಹಚ್ಚಿದ, ಮೌಢ್ಯಕ್ಕೆ ಸೆಡ್ಡು ಹೊಡೆದು ವಿಚಾರಕ್ರಾಂತಿ ಮೆರೆದ, ಜಾತಿ ಮತ ಪಂಥ ಮೀರಿ ಸರ್ವಜನರ ಸ್ವಾಮೀಜಿ ಎನಿಸಿಕೊಂಡವರು ಚಿತ್ರದುರ್ಗದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು. ಶರಣರ ಆಶಯಗಳ ಆರಾಧಕರಾಗಿ, ಅರಿವು, ಆಚಾರ, ವಿಚಾರಗಳ ಸಾಧಕರಾಗಿ ವಿಭಿನ್ನ, ವಿಶಿಷ್ಟ, ವೈಚಾರಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಬೆಳಕಾಗಿರುವ ಸ್ವಾಮೀಜಿ ಅವರು ಹುಟ್ಟು ಹಾಕಿದ ಶರಣಸಂಸ್ಕೃತಿ ಉತ್ಸವಕ್ಕೀಗ 30 ವರ್ಷ. ರಾಜಸತ್ತೆಯ ವಿಜಯದಶಮಿಗೆ ಶರಣ ತತ್ವದ ಸ್ಪರ್ಶ ನೀಡಿ ಶರಣ ಸಂಸ್ಕೃತಿ ಪಸರಿಸಿದ ಉತ್ಸವದ ಕುರಿತು ಶರಣರು ವಿಜಯವಾಣಿ ಚಿತ್ರದುರ್ಗ ಬ್ಯೂರೋ ಮುಖ್ಯಸ್ಥ ನವೀನ್ ಎಂ.ಬಿ. ಅವರಿಗೆ ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

# ಶರಣ ಸಂಸ್ಕೃತಿ ಉತ್ಸವದ ಹಿನ್ನೆಲೆ, ಪರಿಕಲ್ಪನೆ ಏನು?

ಪ್ರಜೆಗಳ ಆರಾಧಕರಾಗಿದ್ದ ರಾಜಮಹಾರಾಜರು ನಾಡಹಬ್ಬವಾಗಿ ವಿಜಯದಶಮಿ ಆಚರಿಸಿಕೊಂಡು ಬರುತ್ತಿದ್ದರು. ರಾಜಸತ್ತೆಯ ಬಳಿಕ ಧಾರ್ವಿುಕ ಕ್ಷೇತ್ರಕ್ಕೂ ಈ ಆಚರಣೆ ಕಾಲಿಟ್ಟಿತು. ನಾವೇನೂ ರಾಜ ಮಹಾರಾಜರಲ್ಲ. ಹೀಗಾಗಿ ಈ ಪರಂಪರೆಗೆ ಪರ್ಯಾಯವಾಗಿ ಶರಣ ಸಂಸ್ಕೃತಿ ಉತ್ಸವದ ಯೋಚನೆ ಮಾಡಿದೆವು. ಅನುಷ್ಠಾನಕ್ಕೂ ತಂದೆವು. ಕಾಯಕ, ದಾಸೋಹ ತತ್ವದ ಜತೆಗೆ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ವಿಚಾರ ಮಂಥನ ನಡೆಯುತ್ತದೆ.

# ಉತ್ಸವ ಆರಂಭವಾಗಿದ್ದು ಯಾವಾಗ ಮತ್ತು ಏನನ್ನು ಬಿಂಬಿಸುತ್ತದೆ?

ನಾವು ಪಟ್ಟಕ್ಕೆ ಬಂದ ವರ್ಷ ಅಂದರೆ 1991ರಿಂದ ಉತ್ಸವಕ್ಕೆ ಚಾಲನೆ ಸಿಕ್ಕಿತು. ಶರಣ ತತ್ವದ ಪ್ರಚಾರ ಹಾಗೂ ಅನುಷ್ಠಾನವೇ ಉತ್ಸವದ ಪ್ರಧಾನ ಆಶಯ. ಆಡಂಬರಕ್ಕೆ ಬ್ರೇಕ್ ಹಾಕಿ ಸರಳತೆ ಮೆರೆದೆವು. ಕಾಯಕ ಪ್ರಜ್ಞೆ, ಕೃಷಿ ಸಂಸ್ಕೃತಿ, ದಾಸೋಹ ಪರಿಕಲ್ಪನೆ ಜತೆೆಗೆ ಜಾತ್ಯತೀತ ತತ್ವ ಹಾಗೂ ಸಮಾನತೆಯನ್ನು ಈ ಉತ್ಸವ ಗಟ್ಟಿಗೊಳಿಸುತ್ತ ಬಂದಿದೆ. ಕಲೆ, ಸಾಹಿತ್ಯ, ಸಂಸ್ಕೃತಿಗೂ ವೇದಿಕೆ ಒದಗಿಸಿದೆ. ಕಾಯಕದ ಒತ್ತಾಸೆಯನ್ನು ಸಾರುತ್ತ ಬಂದಿದ್ದೇವೆ. ಎಲ್ಲ ಸಂದರ್ಭದಲ್ಲಿ ಸಮಾನತೆಯನ್ನು ಒಂದು ತತ್ವ, ಪೂಜೆ ಎಂಬಂತೆ ಪಾಲಿಸಿಕೊಂಡು ಬಂದಿದ್ದೇವೆ.

# ಉತ್ಸವದ ಸಾಮಾಜಿಕ ಕೊಡುಗೆಗಳೇನು?

ಸಮಕಾಲೀನ ಸಮಸ್ಯೆಗಳಿಗೆ ಉತ್ಸವವು ಉತ್ತರ ಹುಡುಕುತ್ತ ಬಂದಿದೆ. ಬಯಲುಸೀಮೆಯ ನೀರಾವರಿ ಯೋಜನೆ, ಕೃಷಿ ಕ್ಷೇತ್ರದ ಬಿಕ್ಕಟ್ಟುಗಳ ಕುರಿತು ಆಳುವ ಸರ್ಕಾರಗಳ ಗಮನ ಸೆಳೆಯಲಾಗಿದೆ. ಕಲೆ, ಸಾಹಿತ್ಯ ಸಂಸ್ಕೃತಿಗೆ ವೇದಿಕೆ ನೀಡಿದೆ. ಮೌಢ್ಯ, ಕಂದಾಚಾರಗಳನ್ನು ಕಟ್ಟಿ ಮೂಲೆಗೆಸೆದು ವೈಚಾರಿಕ ಪ್ರಜ್ಞೆ ಸಾರಿದ್ದೇವೆ. ವಚನ ಕಮ್ಮಟದ ಮೂಲಕ ಶರಣತತ್ವ ಬಿತ್ತಲಾಗಿದೆ. ರೈತರ ಹಿತ ಕಾಯಲು ಕೃಷಿ, ಕೈಗಾರಿಕೆ ವಸ್ತು ಪ್ರದರ್ಶನ, ಕೃಷಿ ಮೇಳ, ಪಶು ಸಂಗೋಪನೆಗೆ ಪ್ರೋತ್ಸಾಹಿಸಲು ಜೋಡೆತ್ತು ಪ್ರದರ್ಶನ ಏರ್ಪಡಿಸಲಾಗಿದೆ. ರಕ್ತದಾನ, ಪ್ಲಾಸ್ಮಾ ದಾನದಂತಹ ಸಾಮಾಜಿಕ ಸೇವಾ ಕಾರ್ಯಗಳಿಗೆ ಉತ್ಸವ ಸಾಕ್ಷಿಯಾಗಿದೆ. ಸಾಧಕರನ್ನು ಗೌರವಿಸಲಾಗಿದೆ.

ಸಮಯವೇ ಒಂದು ಶಕ್ತಿ

ಎಲ್ಲರೂ ದುಡ್ಡನ್ನು ದುಡಿಸಿದರೆ ನಾವು ಕಾಲವನ್ನು ದುಡಿಸುತ್ತೇವೆ. ಸಮಯವೇ ಒಂದು ಶಕ್ತಿ. ಇದನ್ನು ಅಪವ್ಯಯ ಮಾಡದೆ ಸಾಧನೆಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದು ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ಅಭಿಮತ.

# ಮಠದಿಂದ ನಡೆದ ಸಾಮೂಹಿಕ ವಿವಾಹಗಳೆಷ್ಟು?

ಕಳೆದ 30 ವರ್ಷಗಳಿಂದ 16 ಸಾವಿರ ಸಾಮೂಹಿಕ ವಿವಾಹ ಗಳಾಗಿವೆ. ಸ್ವಜಾತಿ, ಅಂತರ್ಜಾತಿ, ಅಂತರ್ ಧರ್ವಿುಯರೂ ಇಲ್ಲಿ ವಿವಾಹವಾಗಿದ್ದಾರೆ. ವಿಧವಾ ವಿವಾಹಗಳಿಗೂ ಪ್ರೋತ್ಸಾಹ ನೀಡಲಾಗಿದೆ. ಯಾವುದೇ ವಾರ, ತಿಥಿ, ನಕ್ಷತ್ರ ನೋಡದೆ ಬಸವತತ್ವದ ಪ್ರಕಾರ ಪ್ರತಿ ತಿಂಗಳು 5ರಂದು ಮದುವೆ ನಡೆಯತ್ತ ಬಂದಿದೆ. ಈ ಶುಭವಿವಾಹಗಳಿಗೆ ಅಮಾವಾಸ್ಯೆಯೂ ಅಡ್ಡ ಬಂದಿಲ್ಲ.

# ಲೋಕಾರ್ಪಣೆಯಾಗುತ್ತಿರುವ ಮುರುಘಾಶ್ರೀ ಮ್ಯೂಸಿಯಂ ವಿಶೇಷತೆ ಏನು?

ಇದು ದೇಶದ ವೈವಿಧ್ಯಮಯ ಹಾಗೂ ವಿರಳ ಮ್ಯೂಸಿಯಂ. ಜಗತ್ತಿನಾದ್ಯಂತ ಸಂಗ್ರಹಿಸಲಾದ ಅಪೂರ್ವ ವಸ್ತುಗಳಿಗೆ ಇಲ್ಲಿ ಜಾಗ ಸಿಕ್ಕಿದೆ. ಎಲ್ಲಿಯೂ ಇಲ್ಲದ ಕನ್ನಡ ವಚನಗಳ ಶಿಲಾ ಶಾಸನ ಇಲ್ಲಿದೆ. ಲೋಹ- ಕಾಷ್ಠ ಶಿಲ್ಪಗಳಿವೆ. ದೇಶ- ವಿದೇಶಗಳ ಕರೆನ್ಸಿಗಳಿವೆ. 50 ಸಾವಿರದಷ್ಟು ಪುರಾತನ ಬೆಲೆ ಬಾಳುವ ವಿಗ್ರಹಗಳಿವೆ. ಶ್ರೀ ಮಠದ ನಾಲ್ವರು ಸ್ವಾಮೀಜಿಗಳಿಗೆ ಸಲ್ಲಿಸಲಾದ ಬಿನ್ನವತ್ತಳೆ, ಪಲ್ಲಕ್ಕಿ, ಮೇನೆ, ಪೂಜಾ ಸಾಮಗ್ರಿಗಳು, ಆ ಕಾಲದ ಕುರ್ಚಿ, ಮಂಚಗಳು, ಭಾವಚಿತ್ರಗಳು ಇಲ್ಲಿವೆ. ನಾಲ್ಕು ತಲೆಮಾರಿನ ಹಿಂದಿನ ಸ್ವಾಮೀಜಿಗಳು ಬಳಸಿದ ಪೋಷಾಕುಗಳಿವೆ. ಲಾಕ್​ಡೌನ್ ಅವಧಿ ಸದ್ಬಳಕೆ ಮಾಡಿಕೊಂಡ ಕಾರಣ ಪ್ರಾಚ್ಯವಸ್ತುಗಳ ಜೋಡಣೆ ಸಾಧ್ಯವಾಯಿತು. ಸುಮಾರು 80 ವರ್ಷ ಹಳೆಯದಾದ ಆಲ್ಬಂಗಳನ್ನು ಅಧ್ಯಯನ ಮಾಡಲಾಯಿತು.

ಚಿನ್ನ ಬದಲು ರುದ್ರಾಕ್ಷಿ ಕಿರೀಟ ಶೋಭಿಸಿದ ವಚನ ಕಟ್ಟುಗಳು

ಚಿತ್ರದುರ್ಗ: ಶರಣರು ಬಯಸಿದಂತೆ ಅಲ್ಲಿ ಆಡಂಬರದ ಬದಲು ಸರಳತೆ ಇತ್ತು. ಚಿನ್ನದ ಬದಲು ರುದ್ರಾಕ್ಷಿ ಕಿರೀಟ ಶ್ರೀಗಳ ಶಿರವನ್ನು ಅಲಂಕರಿಸಿತ್ತು. ಕೈಗಳಲ್ಲಿ ಚಿನ್ನಾಭರಣಗಳ ಬದಲು ವಚನದ ಕಟ್ಟುಗಳು ಶೋಭಿಸಿದವು. ರಜತ ಸಿಂಹಾಸನಾರೋಹಣದ ಬದಲು ಕಟ್ಟಿಗೆಯಿಂದ ತಯಾರಿಸಿದ ಪೀಠ ಅಲಂಕರಿಸಿ, ಭಕ್ತರಿಗೆ ದರ್ಶನ ನೀಡಲಾಯಿತು.

ಶರಣ ಸಂಸ್ಕೃತಿ ಉತ್ಸವ ಮೂಲಕ ಬಸವಾದಿ ಶಿವಶರಣರ ಆಶಯಗಳನ್ನು ಬಿತ್ತುತ್ತಿರುವ ಚಿತ್ರದುರ್ಗದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಮಂಗಳವಾರ ಮಠದ ರಾಜಾಂಗಣದಲ್ಲಿ ಶೂನ್ಯಪೀಠಾರೋಹಣ ಮಾಡಿದ ಪರಿ ಇದು. ಶ್ರೀಮಠದ ಮೂಲಗದ್ದುಗೆಗೆ ಪೂಜೆ ಸಲ್ಲಿಸಿ ರಾಜಾಂಗಣಕ್ಕೆ ಆಗಮಿಸಿದ ಶರಣರು, ಪೀಠಾರೋಹಣ ಮಾಡುತ್ತಿದ್ದಂತೆ ನೆರೆದಿದ್ದ ಭಕ್ತರಿಂದ ಜಯಘೊಷ ಮೊಳಗಿದವು. ಕರೊನಾ ಕಾರಣಕ್ಕೆ ಸಾಮಾಜಿಕ ಅಂತರ ಕಾಪಾಡಲಾಗಿತ್ತು. ಪೀಠಾರೋಹಣ ನಂತರ ನಡೆವ ಬೆಳ್ಳಿ ಪಲ್ಲಕ್ಕಿ ಉತ್ಸವದಲ್ಲಿ ತಾವು ಆಸೀನರಾಗುವ ಬದಲು ಅಲ್ಲಮ ಪ್ರಭು, ಬಸವಣ್ಣರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿ ಗಳನ್ನಿಟ್ಟು ಮೆರವಣಿಗೆ ಜತೆ ಹೆಜ್ಜೆ ಹಾಕಿದರು. ವೀರಗಾಸೆ ಸೇರಿ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಹಿರಿಯ ಶ್ರೀಗಳು ಮಠದ ಪರಂಪರೆಯಂತೆ ಬಂಗಾರದ ಕಿರೀಟ, ಪಾದುಕೆ ಧರಿಸಿ, ಕೈಯಲ್ಲಿ ಬೆಳ್ಳಿಗದೆ ಹಿಡಿದು ಬೆಳ್ಳಿ ಸಿಂಹಾಸನರೂಢರಾಗಿ ಭಕ್ತರಿಗೆ ದರ್ಶನ ಕೊಡುತ್ತಿದ್ದರು. ನಾವು ಪೀಠಕ್ಕೆ ಬಂದ ನಂತರ ಚಿನ್ನಾಭರಣಗಳನ್ನು ತ್ಯಜಿಸಿ ಸರಳತೆ ರೂಢಿಸಿಕೊಂಡಿದ್ದೇವೆ. | ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು

ಉತ್ಸವಕ್ಕೆ ಇಂದು ತೆರೆ

ಸರಳ ಶರಣ ಸಂಸ್ಕೃತಿ ಉತ್ಸವಕ್ಕೆ ಬುಧವಾರ ಸಂಜೆ ಬಸವ ತತ್ವ- ವಿಶ್ವ ತತ್ವ ವಿಚಾರ ಸಂಕಿರಣದೊಂದಿಗೆ ತೆರೆ ಬೀಳಲಿದೆ. 28ರ ಬೆಳಗ್ಗೆ 7.30ಕ್ಕೆ ಅನುಭವ ಮಂಟಪದಲ್ಲಿ ಸಹಜ ಶಿವಯೋಗ ನಡೆಯಲಿದೆ. ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಲಿಂ. ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ 27ನೇ ಸ್ಮರಣೋತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಶ್ರೀ ಮಠದ ಅನುಭವ ಮಂಟಪದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಮಂಗಳೂರಿನ ಬಾಯ್ ಜೋನ್ ನೃತ್ಯ ಅಕಾಡೆಮಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net