ವೃತ್ತಿ, ಬರಹದೊಟ್ಟಿಗೆ ಜೀವಿಸುತ್ತಿರುವ ಡಾ. ಕಟಕೋಳ

h30-dr.katakola
Published on

ಹುಬ್ಬಳ್ಳಿ: ವೈದ್ಯರಾಗಿ ಸೇವೆ ಸಲ್ಲಿಸಿದ್ದಲ್ಲದೇ ಸಾಹಿತ್ಯ ರಂಗದಲ್ಲಿಯೂ ತಮ್ಮ ಛಾಪು ಮೂಡಿಸಿದವರು ಡಾ. ಸಿದ್ದೇಶ್ವರ ಕಟಕೋಳ. ಅವರು ಸೇವೆ, ಬದುಕು, ಬರಹ, ಸಾಧನೆಗಳನ್ನು ಒಟ್ಟೊಟ್ಟಿಗೆ ಮೈಗೂಡಿಸಿಕೊಂಡಿದ್ದಾರೆ ಎಂದು ಕೆಎಂಸಿಆರ್‌ಐ ವೈದ್ಯರ ಸಂಘದ ಅಧ್ಯಕ್ಷ ಡಾ. ಎಸ್.ವೈ. ಮುಲ್ಕಿಪಾಟೀಲ ಬಣ್ಣಿಸಿದರು.

ಇಲ್ಲಿಯ ಕೆಎಂಸಿಆರ್‌ಐನ ನೃತಪತುಂಗ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸೇವಾ ನಿವೃತ್ತಿ ಹೊಂದಿದ ಡಾ. ಸಿದ್ದೇಶ್ವರ ಕಟಕೋಳ ಅವರ ಬೀಳ್ಕೊಡ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಹಳ ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಸ್ಥಳೀಯ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿಬ್ಬಂದಿ ಮತ್ತು ರೋಗಿಗಳೊಂದಿಗೆ ಒಡನಾಟ ಇಟ್ಟುಕೊಂಡು, ಕೆಎಂಸಿಆರ್‌ಐನ ಶ್ರೇಯಾಭಿವೃದ್ಧಿಗೂ ಶ್ರಮಿಸಿದ್ದಾರೆ ಎಂದರು.

ನೇತ್ರ ತಜ್ಞ ಡಾ. ರಾಜಶೇಖರ ದ್ಯಾಬೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಟಕೋಳ ಕುಟುಂಬದ 10 ಜನರು ದೇಹದಾನದ ವಾಗ್ದಾನ ಮಾಡಿದ್ದಾರೆ. ಈ ಕುಟುಂಬ ಇತರರಿಗೂ ಮಾದರಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸಿದ್ದೇಶ್ವರ ಕಟಕೋಳ ಅವರು, ಈ ಆಸ್ಪತ್ರೆಯನ್ನು ನನ್ನ ಕುಟುಂಬದಂತೆ ನೋಡಿಕೊಂಡಿದ್ದೇನೆ ಎಂಬ ತೃಪ್ತಭಾವವಿದೆ. ಲೋಪವಾಗಿದ್ದರೂ ಅದನ್ನು ಮನ್ನಿಸಬೇಕೆಂದರು.

ಇದೇ ವೇಳೆ ಡಾ. ಸಿದ್ದೇಶ್ವರ ಕಟಕೋಳ ಕುಟುಂಬವನ್ನು ಸನ್ಮಾನಿಸಲಾಯಿತು.

ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ನೇತ್ರ ಬ್ಯಾಂಕ್ ಮುಖ್ಯಸ್ಥೆ ಡಾ. ಶೋಭಾ ಕಟಕೋಳ, ಡಾ.ಕೆ.ಎಫ್. ಕಮ್ಮಾರ, ಡಾ. ಮಂಜುನಾಥ ನೇಕಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net