ಬಿಜೆಪಿ ಕಾರ್ಯಕರ್ತರೊಂದಿಗೆ ಡಾ.ಸಿದ್ದರಾಮಯ್ಯ ಸಭೆ ಇಂದು: ಎಂಪಿ ಚುನಾವಣೆಯಲ್ಲಿ ಸ್ಪರ್ಧೆಯ ಚರ್ಚೆ

12_01_Mdy_03(Bjp Dr.Siddaramaiha)
Published on

ಮಂಡ್ಯ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಫೆ.2ರಂದು ಕಾರ್ಯಕರ್ತರ ಸಭೆ ಕರೆದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಂಬಂಧ ಚರ್ಚೆ ನಡೆಯಲಿದೆ. ಹಾಲಿ ಸಂಸದೆ ಬಳಿಕ ಬಿಜೆಪಿ ಟಿಕೆಟ್‌ಗಾಗಿ ಮತ್ತೊಬ್ಬರು ಬೇಡಿಕೆ ಇಟ್ಟಂತಾಗಿದೆ.

2018ರಲ್ಲಿ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ 2,44,404 ಮತಗಳನ್ನು ಸಿದ್ದರಾಮಯ್ಯ ಪಡೆದಿದ್ದರು. ಇದಾದ ಬಳಿಕ ಪಕ್ಷ ನೀಡಿದ ಹಲವು ಜವಾಬ್ದಾರಿಯನ್ನು ನಿರ್ವಹಣೆ ಮಾಡಿದ್ದಾರೆ. ಪಕ್ಷ ಸಂಘಟನೆಯೊಂದಿಗೆ ತನ್ನದೇ ಆದ ಬೆಂಬಲಿಗರ ಬಳಗವನ್ನು ಹೊಂದಿದ್ದಾರೆ.

ಇನ್ನು 2009ರಿಂದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದಿರುವ ಚುನಾವಣೆ ಪೈಕಿ ಬಿಜೆಪಿಯಿಂದ ಸ್ಪರ್ಧಿಸಿ ಹೆಚ್ಚು ಮತಗಳನ್ನು ಗಳಿಸಿದ ಹೆಗ್ಗಳಿಕೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ. 2009ರಲ್ಲಿ ಎಲ್.ಆರ್.ಶಿವರಾಮೇಗೌಡ 1,44,875 ಮತಗಳನ್ನು ಪಡೆದಿದ್ದರು. 2014ರಲ್ಲಿ ಪ್ರೊ.ಬಿ.ಶಿವಲಿಂಗಯ್ಯ ಅವರು 86,993 ಮತವನ್ನು ಗಳಿಸಿದ್ದರು. 20009ರಲ್ಲಿ ಶೇ.14.04ರಷ್ಟಿದ್ದ ಬಿಜೆಪಿಯ ಮತ ಗಳಿಕೆ 2018ರಲ್ಲಿ ಶೇ.27.36ಕ್ಕೆ ಏರಿಕೆಯಾಗಿತ್ತು.

ಕ್ಷೇತ್ರವನ್ನು ಉಳಿಸಿಕೊಳ್ಳಲು ಒತ್ತಾಯ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಅದರಂತೆ ಪ್ರಾಬಲ್ಯವಿರುವ ಮಂಡ್ಯವನ್ನು ಉಳಿಸಿಕೊಳ್ಳಲು ಜೆಡಿಎಸ್ ಮುಂದಾಗಿದೆ. ಆದರೆ ಜಿಲ್ಲೆಯಲ್ಲಿ ಬಿಜೆಪಿಯೂ ಪ್ರಬಲವಾಗಿದೆ. ಇದಕ್ಕೆ ಪೂರಕವೆನ್ನುವಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಮತಗಳಿಕೆಯನ್ನು ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳುವಂತೆ ಒತ್ತಡ ಹೇರಲು ಸಭೆ ಆಯೋಜಿಸಲಾಗಿದೆ. ಫೆ.2ರಂದು ಬೆಳಗ್ಗೆ 11ಗಂಟೆಗೆ ಸಭೆ ಪ್ರಾರಂಭವಾಗಲಿದೆ. ಇಲ್ಲಿಗೆ ಪಕ್ಷದ ಯಾವೆಲ್ಲ ಮುಖಂಡರು ಭಾಗವಹಿಸಲಿದ್ದಾರೆನ್ನುವುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net