ಉತ್ತರ ಕರ್ನಾಟಕ ಅಭಿವೃದ್ಧಿಗೆ ನೂತನ ಆಯೋಗ ರಚನೆ ತುರ್ತು ಅಗತ್ಯ

IMG-20230215-WA0016-1.jpg
Published on

ಬೆಳಗಾವಿ : ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗು ಬರದಂತೆ ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಪ್ರತ್ಯೇಕ ರಾಜ್ಯದ ಕೂಗು ಗಟ್ಟಿಗೊಳಿಸುವ ಭಾವ ಮೂಡದಂತೆ ಅಭಿವೃದ್ಧಿ ಸಾಧಿಸಲು ಈ ಬಾರಿಯ ಬಜೆಟ್‌ನಲ್ಲಿ ನೂತನ ಆಯೋಗ ರಚಿಸಿ ಘೋಷಿಸಬೇಕು ಎಂದು ಗದಗಿನ ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಸಾಧಿಸುವುದಕ್ಕಾಗಿ ನಂಜುಂಡಪ್ಪ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿ ಎಂದು ಒತ್ತಾಯಿಸುತ್ತಿದ್ದರೂ ಸರ್ಕಾರ ನಿರ್ಲಕ್ಷಿಸಿದೆ. ಇದೀಗ ಆ ವರದಿ ಅಪ್ರಸ್ತುತವಾಗಿದ್ದು, ನೂತನ ಆಯೋಗ ರಚನೆ ಮಾಡುವುದು ತುರ್ತು ಅಗತ್ಯವಾಗಿದೆ ಎಂದರು.
ಉತ್ತರ ಕರ್ನಾಟಕದ ನಿರ್ಲಕ್ಷೃದ ನಡುವೆಯೂ ಅಖಂಡ ಕರ್ನಾಟಕ ಪರಿಕಲ್ಪನೆಯಿಟ್ಟುಕೊಂಡಿರುವ ಈ ಭಾಗದ ಜನರು ಕರ್ನಾಟಕ ಏಕೀಕರಣ ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗು ಬಾರದಂತೆ ಬಸವರಾಜ ಬೊಮ್ಮಾಯಿ ಸರ್ಕಾರ ಗಮನ ಹರಿಸಬೇಕು. ಕಳಸಾ ಬಂಡೂರಿ ಯೋಜನೆಯಲ್ಲಿ ಗೋವಾ ಸರ್ಕಾರ ಹಾಕಿದ್ದ ಅರ್ಜಿ ತಿರಸ್ಕರಿಸಿದೆ ಎಂದು ರಾಜ್ಯದಲ್ಲಿ ಅರ್ಥೈಸಲಾಗಿದೆ. ಆದರೆ, ಗೋವಾ ಸಲ್ಲಿಸಿದ ಅರ್ಜಿಗೆ ರಾಜ್ಯ ಸರ್ಕಾರ ಉತ್ತರವಾಗಿ ದಾಖಲೆಗಳ ಸಮೇತ ಮಾಹಿತಿ ನೀಡಿದರೆ ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಯ ಜನರಿಗೆ ಕುಡಿಯುವ ನೀರು ಸಿಗುವ ಹಾಗೆ ಮಾಡಬೇಕು ಎಂದರು.

ಪೂರ್ಣ ಪ್ರಮಾಣದ ಅಧಿವೇಶ ನಡೆಸಿ: ಕಳೆದ ಹಲವು ವರ್ಷಗಳಿಂದ  ಸರ್ಕಾರದ  ಮುಂದೆ ಸಾಕಷ್ಟು ವಿಷಯಗಳನ್ನು ಇಡುತ್ತ ಬಂದಿದ್ದೇವೆ. ಅವು ಸಾಕರಗೊಳ್ಳದೆ ಇರುವುದು ವಿಪರ್ಯಾಸ. ಸುಮಾರು 400 ಕೋಟಿ ರೂ. ಖರ್ಚು ಮಾಡಿ ಸುವರ್ಣ ವಿಧಾನಸೌಧವನ್ನು ನಿರ್ಮಾಣ ಮಾಡಿದ್ದಾರೆ. ಅಧಿವೇಶನದಲ್ಲಿ ಮಾತ್ರ ಅದು ಉಪಯೋಗಕ್ಕೆ ಬರುತ್ತದೆ. ಬಾಕಿ ದಿನ ಖಾಲಿ ಉಳಿಯುತ್ತದೆ. ಆದ್ದರಿಂದ ಉತ್ತರ ಕರ್ನಾಟಕದಲ್ಲಿ ಅಗತ್ಯವಾಗಿರುವ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು ಹಾಗೂ ಪೂರ್ಣ ಪ್ರಮಾಣದ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.
ಹೊರರಾಜ್ಯದ ಪ್ರವಾಸಿಗರಿಗೆ ರಾಜ್ಯದ ಸಂಸ್ಕೃತಿ ಪರಿಚಯಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಸಾಂಸ್ಕೃತಿಕ ಗ್ರಾಮ ನಿರ್ಮಿಸಬೇಕು ಎಂದು ಹಕ್ಕೊತ್ತಾಯ ಮಾಡಿದ ಅವರು, ಹಿಡಕಲ್ ಡ್ಯಾಮ್ ಹಿನ್ನೀರಿನ ಪ್ರದೇಶದಲ್ಲಿ ಬಸವೇಶ್ವರರ ಬೃಹತ್ ಪ್ರತಿಮೆ ಸ್ಥಾಪನೆ ಮಾಡಬೇಕು. ಜತೆಗೆ ರಾಜ್ಯದ ಇನ್ನುಳಿದ ಕಾಯಕ ಸಮಾಜಗಳನ್ನು ಪ್ರತಿನಿಧಿಸುವ ಮಹಾತ್ಮರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು.

ಮದ್ಯ ಮಾರಾಟ ನಿಷೇಧಿಸಿ: ಗಡಿ ಭಾಗದಲ್ಲಿರುವ ಜಿಲ್ಲೆಗಳಿಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು, ಮರಾಠಿ ಭಾಗದಲ್ಲಿರುವ ಶಾಲೆಗಳಿಗೆ ಮೂಲಭೂತ ಸೌಕರ್ಯ, ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಧನ ಸಹಾಯವನ್ನು ಸರ್ಕಾರ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ವ್ಯಸನಮುಕ್ತ ಸಮಾಜ ಉಳಿಯಬೇಕಿದ್ದರೆ ಮದ್ಯಪಾನ ನಿಷೇಧಿಸಬೇಕು. ಶಾಲಾ ಆವರಣದಲ್ಲಿ ನಾಮಫಲಕ ಹಾಕಿದರೂ ಅದರ ಪಕ್ಕದಲ್ಲಿಯೇ ಮದ್ಯ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದರು.
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಸಿಕೊಳ್ಳುವ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದರೂ ಇಲ್ಲಿಯವರೆಗೆ ಅನುದಾನ ಬಂದಿಲ್ಲ. ಈ ಭಾಗದಲ್ಲಿ ಗಣಿಗಾರಿಕೆ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದೆ. ಸರ್ಕಾರ ಕಪ್ಪತ್ತಗುಡ್ಡದ ರಕ್ಷಣೆ ಮಾಡಿ, ಅಭಿವೃದ್ಧಿ ಪಡಿಸಬೇಕು. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಿತ್ತೂರು ಮಾರ್ಗದಲ್ಲಿ ರೈಲ್ವೆ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಬೇಕು. ಗಡಿ ಹಾಗೂ ಹೊರನಾಡು ಕನ್ನಡಿಗರಿಗೆ ರಾಜ್ಯ ಸರ್ಕಾರ ವಿಶೇಷ ಸೌಲಭ್ಯ ನೀಡಿ ಕನ್ನಡಿಗರ ಹಿತಕಾಯಬೇಕು. ಕನ್ನಡ ಪ್ರತಿಷ್ಠಾನ ಹಾಗೂ ಕನ್ನಡ ಸಂಘಟನೆ ಹಾಗೂ ಕಲಾವಿದರಿಗೆ ವಿಶೇಷ ಯೋಜನೆಗಳನ್ನು ರೂಪಿಸಿ, ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಂದಿಗುಂದ ಶಿವಾನಂದ ಸ್ವಾಮೀಜಿ, ಗೋಕಾಕ ಮುರುಘೇಂದ್ರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಕಿತ್ತೂರಿನ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ, ಕಡೋಲಿಯ ಗುರುಬಸವಲಿಂಗ ಸ್ವಾಮೀಜಿ, ಹುಕ್ಕೇರಿಯ ಶಿವಬಸವ ಸ್ವಾಮೀಜಿ, ಶೇಗುಣಸಿಯ ಮಹಾಂತ ಸ್ವಾಮೀಜಿ , ಅರಳಿಕಟ್ಟಿಯ ಶಿವಮೂರ್ತಿ, ಕುಲವಳ್ಳಿಯ ಮಲ್ಲಿಕಾರ್ಜುನ ದೇವರು ಇದ್ದರು.


ಮಾ.4ರಿಂದ ಲಿಂಗಾಯತ ಸಮುದಾಯದ ಅಧಿವೇಶನ
ಮಾ.4, 5ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಅಖಿಲ ಭಾರತ ಜಾಗತಿಕ ಲಿಂಗಾಯತ ಮಹಾಸಭಾದಿಂದ ಲಿಂಗಾಯತ ಸಮುದಾಯದ ಅಧಿವೇಶನ ನಡೆಸಲಾಗುತ್ತಿದೆ. ಸಮುದಾಯದ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಡಾ.ಸಿದ್ದರಾಮ ಸ್ವಾಮೀಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net