ಪ್ರತಿಯೊಬ್ಬರಿಗೂ ಡಾ.ಶ್ಯಾಮಪ್ರಸಾದ್ ಮುಖರ್ಜಿ ಆದರ್ಶ

23 HANUR 2
ಹನೂರಿನಲ್ಲಿ ಬಿಜೆಪಿ ಮಂಡಲದ ವತಿಯಿಂದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಬಲಿದಾನ ದಿವಸ್ ಆಚರಿಸಲಾಯಿತು. ವೃಷಭೇಂದ್ರಸ್ವಾಮಿ, ಮಹದೇವಸ್ವಾಮಿ, ಜಗನ್ನಾಥನಾಯ್ಡು, ಲೋಕೇಶ್ ಜತ್ತಿ ಇತರರು ಇದ್ದರು.
Published on

ಹನೂರು: ಪ್ರತಿಯೊಬ್ಬರೂ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಆದರ್ಶ ಪಾಲಿಸುವ ಮೂಲಕ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು ಎಂದು ಬಿಜೆಪಿ ಹನೂರು ಮಂಡಲ ಅಧ್ಯಕ್ಷ ಕಣ್ಣೂರು ಕೆ.ಪಿ.ವೃಷಭೇಂದ್ರಸ್ವಾಮಿ ಸಲಹೆ ನೀಡಿದರು.

ಪಟ್ಟಣ ಸಮೀಪದ ಆರ್.ಎಸ್.ದೊಡ್ಡಿಯಲ್ಲಿ ಸೋಮವಾರ ಡಾ.ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿವಸ್ ಆಚರಣೆ ಅಂಗವಾಗಿ ಕಾರ್ಯಕರ್ತರ ಜತೆಗೂಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮುಖರ್ಜಿ ಒಬ್ಬ ದಕ್ಷ ರಾಜಕಾರಣಿ. ಪಂಡಿತ್ ಜವಾಹರ್ ಲಾಲ್ ನೇತೃತ್ವದ ಸರ್ಕಾರದಲ್ಲಿ ಮೊದಲ ಕೈಗಾರಿಕಾ ಸಚಿವರಾಗಿದ್ದರು. ಅಲ್ಲದೆ ಕೈಗಾರಿಕಾ ನೀತಿ ರೂಪಿಸಿದರು. ದೇಶದ ಆರ್ಥಿಕತೆ ಬಲಪಡಿಸುವ ಸಲುವಾಗಿ ಗ್ರಾಮೋದ್ಯೋಗ ರಚಿಸಿದರು. ಬಳಿಕ ರಾಜಕೀಯ ಬದಲಾವಣೆಯಿಂದ 1951ರಲ್ಲಿ ಭಾರತೀಯ ಜನಸಂಘ ಸ್ಥಾಪಿಸಿದರು. ಇದು ಕಾಲಾನಂತರದಲ್ಲಿ ಭಾರತೀಯ ಜನತಾ ಪಾರ್ಟಿಯಾಗಿ ಹೊರ ಹೊಮ್ಮಿತು. ಇದೀಗ ರಾಷ್ಟ್ರೀಯ ಪಕ್ಷವಾಗಿ ಹೆಮ್ಮರವಾಗಿ ಬೆಳೆದಿದೆ ಎಂದರು.

ಮುಖರ್ಜಿ ಅವರು ಜಮ್ಮು-ಕಾಶ್ಮೀರವನ್ನು ದೇಶದ ಅವಿಭಾಜ್ಯ ಅಂಗವಾಗಿಸಲು ಸತತವಾಗಿ ಹೋರಾಡಿದರು. ಇವರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ನನಸು ಮಾಡಿದ್ದಾರೆ. ಇವರು ಸಾಂಸ್ಕೃತಿಕ ರಾಷ್ಟ್ರೀಯತೆಯ ಪ್ರತಿಪಾದಕರಾಗಿದ್ದು, ಬಿಜೆಪಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದರು. ಇದರ ಫಲ ದೇಶದಲ್ಲಿ ಬಿಜೆಪಿ ಪಕ್ಷ ಸದೃಢವಾಗಿ ಬೇರೂರಿದೆ. ಹಾಗಾಗಿ ಇವರನ್ನು ಗೌರವಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ದೆಸೆಯಲ್ಲಿ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಕ್ಷದ ಸಂಘಟನೆಗೆ ಒತ್ತು ನೀಡಿ: ನರೇಂದ್ರ ಮೋದಿ ಅವರು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದು, ಜನಮನ್ನಣೆ ಗಳಿಸಿದ್ದಾರೆ. ಹಾಗಾಗಿ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಗಳಿಸುವುದರ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ವಿಶ್ವಾಸವಿದೆ. ಆದ್ದರಿಂದ ಪ್ರತಿಯೊಬ್ಬರೂ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ ಮಾತನಾಡಿದರು. ಮಂಡಲದ ಮಾಜಿ ಅಧ್ಯಕ್ಷ ಜಗನ್ನಾಥ ನಾಯ್ಡು, ಮಂಡಲದ ಒಬಿಸಿ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಲೋಕೇಶ್ ಜತ್ತಿ, ಯುವ ಮೋರ್ಚಾ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷರಾದ ಕೃಷ್ಣೇಗೌಡ, ದೊಡ್ಡಮಾದಪ್ಪ, ಮುಖಂಡರಾದ ಶ್ರೀನಿವಾಸಮೂರ್ತಿ, ರಾಚಪ್ಪ, ಲಿಂಗಾಚಾರಿ, ಮುತ್ತುಸ್ವಾಮಿ, ಮಹದೇವಸ್ವಾಮಿ, ನಂಜುಂಡಸ್ವಾಮಿ, ರಾಜಣ್ಣ, ಮಲ್ಲಿಕಾರ್ಜುನ ಸ್ವಾಮಿ, ಕುಮಾರಸ್ವಾಮಿ, ಶಿವಲಿಂಗು, ಗೋವಿಂದರಾಜು, ತಾಂಡಶೆಟ್ಟಿ ಚಿಕ್ಕರಾಜು, ಮೂರ್ತಿ, ಲಿಂಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net