

ಹುಬ್ಬಳ್ಳಿ: ಇಲ್ಲಿಯ ಅರವಿಂದ ನಗರದ ಹುಬ್ಬಳ್ಳಿ -ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಡಾ. ಶ್ಯಾಮಾ ಪ್ರಸಾದ ಮುಖರ್ಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಶನಿವಾರ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
ಆರ್‌ಎಸ್‌ಎಸ್ ಪ್ರಾಂತ ಸಂಚಾಲಕ ರವೀಂದ್ರ ಮಾತನಾಡಿ, ಕಾಶ್ಮೀರದಲ್ಲಿ ಶಾಂತಿ ನೆಲಸಬೇಕೆಂದು ಹೋರಾಟ ಮಾಡಿದ್ದರು. ಇಂಥವರ ಹೋರಾಟದ ಫಲವೇ ಈಗ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಮುಖರ್ಜಿ ಅವರ ಕನಸು ನನಸಾಗಿದೆ ಎಂದು ಸ್ಮರಿಸಿದರು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಶ್ಯಾಮಾ ಪ್ರಸಾದ ಮುಖರ್ಜಿ ಅವರ ಕನಸು ನನಸು ಮಾಡುತ್ತಿದ್ದಾರೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಶ್ಯಾಮಾಪ್ರಸಾದ ಮುಖರ್ಜಿ ಅವರು ಬಿತ್ತಿದ ಬೀಜ ಈಗ ಹೆಮ್ಮರವಾಗಿದೆ. ಅದರ ನೆರಳಲ್ಲಿ ನಾವು ಜೀವನ ನಡೆಸುತ್ತಿದ್ದೇವೆ ಎಂದರು.
ಮಾಜಿ ಶಾಸಕ ಅಶೋಕ ಕಾಟವೆ ಅಧ್ಯಕ್ಷತೆ ವಹಿಸಿದ್ದರು.
ಮಹಾಪೌರ ರಾಮಣ್ಣ ಬಡಿಗೇರ, ಉಪ ಮಹಾಪೌರ ದುರ್ಗಮ್ಮ ಬಿಜವಾಡ, ಪ್ರಮುಖರಾದ ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಬಸವರಾಜ ಗರಗ, ಸುನೀಲ ಮೋರೆ, ರಾಧಾಬಾಯಿ ಸಫಾರೆ, ಈಶ್ವರಗೌಡ ಪಾಟೀಲ, ರವಿ ನಾಯಕ, ರಾಜು ಜರತಾರಘರ ಇದ್ದರು.
ಭೇಟಿ: ನಗರದ ವಾರ್ಡ್ ನಂ. 5ರ ಚನ್ನಪೇಟ ಅಂಬೇಡ್ಕರ್ ನಗರಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಭೇಟಿ ನೀಡಿ, ಮಳೆಬಾಧಿತ ಪ್ರದೇಶ ವೀಕ್ಷಿಸಿದರು.
ಮನೆಗಳಿಗೆ ಧಕ್ಕೆಯಾಗಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕರು, ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಸದಸ್ಯೆ ಚಂದ್ರಿಕಾ ಮೇಸ್ತ್ರಿ, ತಹಸೀಲ್ದಾರ್ ಕಲಗೌಡ ಪಾಟೀಲ, ರಂಗಾ ಬದ್ದಿ, ಸೀಮಾ ಲದ್ವಾ, ಸುಭಾಷ ಅಕ್ಕಲಕೋಟೆ ಇತರರು ಇದ್ದರು.