ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣೆಯ 27ನೇ ಸಂಗೀತ ಸಮ್ಮೇಳನಕ್ಕೆ ಚಾಲನೆ

17 - Copy
Published on

ಮೈಸೂರು: ಇತ್ತೀಚೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಿರಿಯರ ಹಾಜರಾತಿ ಕಡಿಮೆಯಾಗುತ್ತಿರುವುದು ಶೋಚನೀಯವಾಗಿದೆ ಎಂದು ವಿದ್ವಾನ್ ವಿ.ನಂಜುಂಡಸ್ವಾಮಿ ಹೇಳಿದರು.

ಜೆಎಸ್‌ಎಸ್ ಸಂಗೀತಾ ಸಭಾ ಟ್ರಸ್ಟ್ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣೆಯ 27ನೇ ಸಂಗೀತ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಿರಿಯರಿಗಿಂದು ಕೇಳುವ ತಾಳ್ಮೆಯೇ ಇಲ್ಲವಾಗಿದೆ. ಕೇಳಿಸಿಕೊಳ್ಳುವ ಗುಣವಿದ್ದರೆ ಮಾತ್ರ ಪ್ರತಿಭೆಯು ಹೊರಬರುತ್ತದೆ ಎಂದರು. ಕಲಾವಿದರು ಜನಪ್ರಿಯತೆಯ ಹಿಂದೆ ಹೋಗದೆ ತಾಳ್ಮೆಯಿಂದ ಅಭ್ಯಾಸ ನಡೆಸಿದರೆ ಮಾತ್ರ ಸಾಧನೆ ಎಂಬ ಗುರಿ ತಲುಪಬಹುದು ಎಂದರು. ಕಲಾವಿರಿಗೆ ಕೇಳ್ಮೆ-ತಾಳ್ಮೆಗಳ ಜತೆಗೆಜಾಣ್ಮೆಯೂ ಮುಖ್ಯವಾಗಿದೆ. ಜತೆಗೆ ಕಲಾ ಸಾಧನೆಯಿಂದ ಪಡೆದ ಜ್ಞಾನ ಅಹಂಕಾರಕ್ಕೆ ಕಾರಣವಾಗಬಾರದು ಎಂದರು.

ಕೇಳ್ಮೆ, ತಾಳ್ಮೆ, ಜಾಣ್ಮೆ ಎಂಬ ಈ ಸೂತ್ರವನ್ನು ಪಾಲಿಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡಿದ್ದರ ಫಲವೇ ಸಂಗೀತ ಸಮ್ಮೇಳನ ಅಧ್ಯಕ್ಷ ಪದವಿ. ನನ್ನ ಒಡನಾಟದ ಎಲ್ಲ ಸಾಧಕರು ನನಗೆ ಕಲಿಸಿದ ಪಾಠ ಇದು. ತ್ರಿಸೂತ್ರವನ್ನು ಸಾಧನಪಥದಲ್ಲಿ ಸಾಗುತ್ತಿರುವ ಎಲ್ಲ ಕಿರಿಯರಿಗೂ ವರ್ಗಾಯಿಸುತ್ತಿದ್ದೇನೆ ಅಷ್ಟೆ ಎಂದರು.

ಆರೋಗ್ಯ ಮತ್ತು ನೆಮ್ಮದಿ ಎಲ್ಲರಿಗೂ ಮುಖ್ಯವಾಗಿದೆ. ಈ ವಿಚಾರಗಳನ್ನು ವಿವಿಧ ಸ್ತರಗಳಲ್ಲಿ ವಚನಕಾರರು, ದಾಸವರೇಣ್ಯರು, ಸಂತಶ್ರೇಷ್ಠರು ಕಾಲಕಾಲಕ್ಕೆ ತಮ್ಮ ಕೃತಿಗಳ ರಚನೆ ಸಂದರ್ಭಗಳಲ್ಲಿ ತಿಳಿಸುವುದರ ಜತೆಗೆ ನವವಿಧಭಕ್ತಿ, ನವರಸಗಳ ಹೊರಣವನ್ನು ಉಣಬಡಿಸಿದ್ದಾರೆ. ಅಂತಹ ಅಮೂಲ್ಯ ಜ್ಞಾನ ಭಂಡಾರವನ್ನು ತಾವು ಕಂಡ ಸತ್ಯದೊಂದಿಗೆ ತತ್ತ್ವಪ್ರತಿಪಾದನೆ ಮೂಲಕ ತಿಳಿಸಿ ಅಮರರಾಗಿರುವವರು ಅನೇಕರಿದ್ದಾರೆ ಎಂದರು.

ಇದಕ್ಕೂ ಮುನ್ನ ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖ್ಯಾತ ಸರ್ಜನ್ ಡಾ.ಸಿ.ಜಿ.ನರಸಿಂಹನ್, ಜೆಎಸ್‌ಎಸ್ ಸಂಗೀತಾ ಸಭಾ ಟ್ರಸ್ಟ್ ಕಾರ್ಯದರ್ಶಿ ಮೈಸೂರು ಎಂ.ಮಂಜುನಾಥ್, ಟ್ರಸ್ಟಿ ಪ್ರೊ.ಕೆ.ರಾಮಮೂರ್ತಿ ಸೇರಿದಂತೆ ಇತರರಿದ್ದರು.

ಬಳಿಕ ಮೈಸೂರು ಎ.ಚಂದನ್‌ಕುಮಾರ್ ಕೊಳಲು ವಾದನ ನಡೆಸಿಕೊಟ್ಟರು. ಇವರಿಗೆ ವಯೋಲಿನ್‌ನಲ್ಲಿ ಮೈಸೂರು ಎಂ. ಸುಮಂತ್, ಮೃದಂಗದಲ್ಲಿ ಕೆ.ಯು.ಜಯಚಂದ್ರರಾವ್, ಘಟ ತುಮಕೂರು ಬಿ. ಶಶಿಶಂಕರ್ ಪಕ್ಕವಾದ್ಯದಲ್ಲಿ ಸಹಕಾರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net