ಶತಮಾನಕ್ಕೆ ಸಾಕ್ಷಿಯಾಗಬಲ್ಲ ಕಡಲ ಭಾರ್ಗವ

Lead
Published on

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ

ಕಾರಂತ ಜನ್ಮದಿನೋತ್ಸವ, ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಾಹಿತಿ, ಚಿಂತಕ, ಲೇಖಕ, ಕಲಾವಿದ ಎನ್ನುವುದನ್ನೂ ಹೊರತುಪಡಿಸಿ ಡಾ. ಕೋಟ ಶಿವರಾಮ ಕಾರಂತ ಅವರನ್ನು ಬಹುಮುಖಿ ವ್ಯಕ್ತಿತ್ವದ ಅಥವಾ ಹತ್ತಾರು ಬಿಂಬಗಳನ್ನು ಪ್ರಾತಿನಿಧಿಸುವ ವ್ಯಕ್ತಿತ್ವ ಎನ್ನಬಹುದು. ಕಠೋರ, ವಾಸ್ತವಿಕತೆಯನ್ನು ಬರಹಗಳ ಮೂಲಕ ಹೇಳುತ್ತಿದ್ದ ಅವರ ಆಕ್ರೋಶ, ಟೀಕೆಗಳು ಸರ್ಕಾರಕ್ಕೂ ಬಿಸಿ ತಟ್ಟುತ್ತಿತ್ತು. ನೇರ ನಡೆ-ನುಡಿಯ, ಶತಮಾನಕ್ಕೆ ಸಾಕ್ಷಿಯಾಗಬಲ್ಲ ಕಡಲ ಭಾರ್ಗವ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು.

Kota
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್​ ಉಡುಪಿ ವತಿಯಿಂದ ಶನಿವಾರ (ಅ.11) ಆಯೋಜಿಸಿದ್ದ ಕಾರಂತ ಜನ್ಮದಿನೋತ್ಸವ- ಸಾಹಿತ್ಯೋತ್ಸವ ಮತ್ತು ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮೂವರಿಗೆ ಪ್ರಶಸ್ತಿ ಪ್ರದಾನ

Kaarantha 3
ಡಾ.ಶಿವರಾಮ ಕಾರಂತ ಅವರ ಹೆಸರಿನಲ್ಲಿ ನೀಡುತ್ತಿರುವ ಪ್ರಥಮ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ ಹಾಗೂ ನಿವೃತ್ತ ಕುಲಪತಿ ಡಾ. ಬಿ.ಎ. ವಿವೇಕ ರೈ ಅವರಿಗೆ ಪ್ರದಾನ ಮಾಡಲಾಯಿತು. ಹಿರಿಯ ಸಂಶೋಧಕಿ ಡಾ. ರೇಖಾ ಬನ್ನಾಡಿ, ಜಾನಪದ ವಿದ್ವಾಂಸ ಎಸ್​.ಎ. ಕೃಷ್ಣಯ್ಯ ಹಾಗೂ ಯಕ್ಷಗಾನ ಕಲಾವಿದ ಶೇಖ್​ ಮಹಮ್ಮದ್​ ಗೌಸ್​ ಕಾವ್ರಾಡಿ ಅವರಿಗೆ ಕಾರಂತ ವಿಶೇಷ ಪುರಸ್ಕಾರ ನೀಡಿ ಗೌರವಿಸಿಲಾಯಿತು. ಟ್ರಸ್ಟ್​ನ ಸದಸ್ಯರಾದ ಡಾ. ಪ್ರಸಾದ ರಾವ್​, ಡಾ. ಭಾರತಿ ಮರವಂತೆ, ಜಿ.ಎಂ. ಷರೀಫ್​ ಹೂಡೆ, ಸತೀಶ ಕೊಡವೂರು ಪ್ರಶಸ್ತಿ ಪತ್ರ ವಾಚಿಸಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಅವರು ಕಾರಂತರ ಕುರಿತ ಮೊದಲ ಬುಲೆಟಿನ್​ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದರು. ಖ್ಯಾತ ವಿಮರ್ಶಕ ಡಾ. ಎಸ್.ಆರ್​. ವಿಜಯಶಂಕರ್​ ವಿಶೇಷ ಉಪನ್ಯಾಸ ನೀಡಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಂಗಳೂರು ವಿವಿ ಅಧ್ಯಕ್ಷ ನಾಗಪ್ಪ ಗೌಡ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರಮೇಶ ಕಾಂಚನ್​, ಟ್ರಸ್ಟ್​ನ ಸದಸ್ಯ ಮಂಚಿ ರಮೇಶ ಉಪಸ್ಥಿತರಿದ್ದರು.

ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಟ್ರಸ್ಟ್​ನ ಅಧ್ಯಕ್ಷ ಗಣನಾಥ ಶೆಟ್ಟಿ ಎಕ್ಕಾರು ಆಶಯ ನುಡಿಗಳನ್ನಾಡಿದರು. ಟ್ರಸ್ಟ್​ನ ಸದಸ್ಯ ಚೇತನ್​ ಶೆಟ್ಟಿ ಕೋವಾಡಿ ಕಾರ್ಯಕ್ರಮ ನಿರೂಪಿಸಿದರು.

ಕಾರಂತರ ಕುರಿತು ಆಯೋಜಿಸಿದ್ದ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಅಮಿತ್​ ರೆಡ್ಡಿ ನಿರ್ದೇಶನದಲ್ಲಿ ಡಾ. ಶಿವರಾಮ ಕಾರಂತ ಕಾದಂಬರಿ ಆಧಾರಿತ ಮೈಮನಗಳ ಸುಳಿಯಲ್ಲಿ ನಾಟಕ ಪ್ರದರ್ಶನ ನಡೆಯಿತು.

ಹಸಿರಾಗೇ ಇರುವ ಕಾರಂತರ ಸಾಹಿತ್ಯ ಕೃಷಿ

ಕಾರಂತ ಪ್ರಶಸ್ತಿ ಸ್ವೀಕರಿಸಿದ ಡಾ. ಬಿ.ಎ. ವಿವೇಕ ರೈ ಮಾತನಾಡಿ, ನನ್ನ ತಂದೆಗೂ ನನಗೂ ಕಾರಂತರು ಮರೆಯಲಾಗದ ಬಾಂಧವ್ಯ. 79 ವರ್ಷದ ಹಿಂದೆ ನನಗೆ ವಿವೇಕ ಎಂದು ನಾಮಕರಣ ಮಾಡಿದ್ದು ಅವರೇ. ನನ್ನ ಜೀವನದ ಎಲ್ಲ ಮಹತ್ವದ ಘಟ್ಟಗಳ ತೀರ್ಮಾನ ಅವರಿಂದಲೇ ಆಗಿದೆ. ಅವರ ಹೆಸರಿನ ಪ್ರಥಮ ಪ್ರಶಸ್ತಿ ಸ್ವೀಕರಿಸಿರುವುದು ನನ್ನ ಪುಣ್ಯ. ಅವರ ಸಾಧನೆ ಅಗಾಧ. ಆನೆ ನಡೆದಿದ್ದೇ ದಾರಿ ಎಂಬಂತೆ ಎಂತಹುದೇ ಟೀಕೆ, ಅವಮಾನಗಳಿಗೂ ಬಗ್ಗದೆ ಅಂದು ಅವರು ಮಾಡಿರುವ ಸಾಹಿತ್ಯ ಕೃಷಿ ಈಗಲೂ, ಮುಂದೆಯೂ ಹಸಿರಾಗಿಯೇ ಇರಲಿದೆ ಎಂದರು.

ಕಾರಂತರಲ್ಲಿದ್ದ ವೈಜ್ಞಾನಿಕ, ವೈಚಾರಿಕ ಚಿಂತನೆಯನ್ನು ಇಂದಿನ ಮಕ್ಕಳಿಗೆ ತಲುಪಿಸಲು ಅನೇಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ತರ ಮತ್ತು ಮಧ್ಯ ಕರ್ನಾಟಕಕ್ಕೆ ಕಾರಂತರ ಪರಿಚಯ ಇಲ್ಲ. ಹೀಗಾಗಿ ಕರ್ನಾಟಕದಾದ್ಯಂತ ಅವರ ವ್ಯಕ್ತಿತ್ವ, ಶಕ್ತಿ, ಸಾಹಿತ್ಯ ಕೃಷಿ ಪರಿಚಯಿಸಲು ಟ್ರಸ್ಟ್​ ಅಣಿಯಾಗಿದೆ. | ಗಣನಾಥ ಶೆಟ್ಟಿ ಎಕ್ಕಾರು. ಕಾರಂತ ಟ್ರಸ್ಟ್​ ಅಧ್ಯಕ್ಷ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್​ ಉಡುಪಿ ವತಿಯಿಂದ ಆಯೋಜಿಸಿದ್ದ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕಿ ಡಾ. ರೇಖಾ ಬನ್ನಾಡಿ, ಜಾನಪದ ವಿದ್ವಾಂಸ ಎಸ್​.ಎ. ಕೃಷ್ಣಯ್ಯ ಹಾಗೂ ಯಕ್ಷಗಾನ ಕಲಾವಿದ ಶೇಖ್​ ಮಹಮ್ಮದ್​ ಗೌಸ್​ ಕಾವ್ರಾಡಿ ಅವರಿಗೆ ಕಾರಂತ ವಿಶೇಷ ಪುರಸ್ಕಾರ ನೀಡಿ ಗೌರವಿಸಿಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಡಾ. ಬಿ.ಎ. ವಿವೇಕ ರೈ, ಪೂರ್ಣಿಮಾ, ಗಣನಾಥ ಶೆಟ್ಟಿ ಎಕ್ಕಾರು, ಎಂ.ಎ. ಗಫೂರ್, ದಿನಕರ ಹೇರೂರು, ನೀಲಾವರ ಸುರೇಂದ್ರ ಅಡಿಗ​, ಡಾ. ಪ್ರಸಾದ ರಾವ್​, ಡಾ. ಭಾರತಿ ಮರವಂತೆ, ಜಿ.ಎಂ. ಷರೀಫ್​ ಹೂಡೆ, ಸತೀಶ ಕೊಡವೂರು ಇತರರಿದ್ದರು.

Kaarantha 4
ಉಡುಪಿಯಲ್ಲಿ ಡಾ.ಶಿವರಾಮ ಕಾರಂತ ಅವರ 123ನೇ ಜನ್ಮದಿನದ ನಿಮಿತ್ತ ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯೆ, ರಂಗೋಲಿಯ ಖ್ಯಾತ ಕಲಾವಿದೆ ಡಾ. ಭಾರತಿ ಮರವಂತೆ ಅವರು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗೋಲಿ ಹುಡಿಯಲ್ಲಿ ಬುದ್ಧಿಮಾತು ಹೇಳುತ್ತಿರುವ ರೀತಿಯಲ್ಲಿ ರಚಿಸಿದ ಕಾರಂತರ ಭಾವಚಿತ್ರ ಗಮನ ಸೆಳೆಯಿತು. ಡಾ. ಭಾರತಿ, ಎರಡೂವರೆ ತಾಸು ಸಮಯದಲ್ಲಿ ಚಿತ್ರ ರಚಿಸಿದ್ದು, ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ರಂಗೋಲಿಯ ಈ ಚಿತ್ರ ಮೆರುಗು ಹೆಚ್ಚಿಸಿತು. ಜನರು ರಂಗೋಲಿಯಲ್ಲಿ ರಚಿತ ಕಾರಂತರ ಭಾವಚಿತ್ರದೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net