

ಸಿಂಧನೂರು: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವನ, ಕಾದಂಬರಿ, ಕತೆ, ಮಕ್ಕಳ ಕವನ, ಚುಟುಕು, ನಾಟಕದಂಥ ಎಲ್ಲ ಪ್ರಕಾರಗಳಲ್ಲಿ ಛಾಪು ಮೂಡಿಸಿರುವ ಡಾ.ಶಿವರಾಮ ಕಾರಂತ ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕನಕದಾಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಚೈತ್ರಾ ಎಂ.ದೊಡ್ಡಬಸವರಾಜ ಹೇಳಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರ 123ನೇ ಜನ್ಮದಿನ ನಿಮಿತ್ತ ನಗರದ ಕನಕದಾಸ ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಚುಟುಕು ಚಂದನ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಚುಸಾಪ ತಾಲೂಕು ಅಧ್ಯಕ್ಷ ಎಂ.ಭಾಸ್ಕರ ಮಾತನಾಡಿ, ಬದುಕಿನ ಭಾವನೆಗಳನ್ನು ಅತ್ಯಂತ ಸಹಜವಾಗಿ ಕಾದಂಬರಿಗಳ ಪಾತ್ರಗಳ ಮೂಲಕ ಚಿತ್ರಿಸಿರುವ ಕಾರಂತರು ಸಾಹಿತ್ಯದ ಮೇರುಪರ್ವತ ಎಂದರು.
ಚುಸಾಪ ಜಿಲ್ಲಾ ಗೌರವಾಧ್ಯಕ್ಷ ಬೀರಪ್ಪ ಶಂಭೋಜಿ, ಕಾರ್ಯಕಾರಿ ಸಮಿತಿ ಸದಸ್ಯ ಸೋಮಣ್ಣ, ಎಸ್‌ಕೆಡಿಆರ್‌ಡಿಪಿ ತಾಲೂಕು ಯೋಜನಾಧಿಕಾರಿ ವಿನಾಯಕ ನಾಯಕ್ ಮಾತನಾಡಿದರು. ಚುಸಾಪ ಜಂಟಿ ಕಾರ್ಯದರ್ಶಿ ಎಸ್. ಪುಷ್ಪಾ, ಖಜಾಂಚಿ ಶರಭಯ್ಯಸ್ವಾಮಿ ಹಿರೇಮಠ, ಪ್ರಧಾನಕಾರ್ಯದರ್ಶಿ ಬಸವರಾಜ ಕುಂಬಾರ, ಕಸಾಪ ತಾಲೂಕಾಧ್ಯಕ್ಷ ಎಚ್.ಎಫ್. ಮಸ್ಕಿ, ಕನಕದಾಸ ಕಾಲೇಜಿನ ಪ್ರಾಚಾರ್ಯರಾದ ಸಿದ್ದಪ್ಪ ಖೈರವಾಡಿಗಿ, ವೀಣಾಶ್ರೀ, ಚುಸಾಪ ಜಿಲ್ಲಾ ಪ್ರತಿನಿಧಿ ಅಮರೇಶ ಹೂಗಾರ, ಹನುಮಂತ ಇತರರಿದ್ದರು.