ಗುಡಿ ಕಟ್ಟುವ ಬದಲು ಶಾಲೆ ದುರಸ್ತಿಗೊಳಿಸಿ

chn may 22 shetti halli
Published on

ಚನ್ನಗಿರಿ: ದೇವಾಲಯಗಳ ನಿರ್ವಣಕ್ಕೆ ಮುಂದಾಗುವ ಬದಲು ಬೀಳುವ ಹಂತದಲ್ಲಿರುವ ಶಾಲೆಗಳನ್ನು ದುರಸ್ತಿ ಪಡಿಸಿದರೆ ಗ್ರಾಮಗಳು ಪ್ರಗತಿ ಹೊಂದಲಿವೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಗುರುವಾರ ಕೆರೆ ಹಾಗೂ ಗೋಕಟ್ಟೆಯನ್ನು ಏತನೀರಾವರಿ ಯೋಜನೆಗೆ ಒಳ ಪಡಿಸುವ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಗೌರವ ಸಮರ್ಪಣೆ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಣ್ಣ ಗ್ರಾಮವಾಗಿದ್ದರೂ ಹತ್ತಾರು ದೇವಾಲಯಗಳು ನಿರ್ವಣವಾಗುತ್ತಿವೆ. ದೇವಸ್ಥಾನಕ್ಕೆ ನೀಡುವ ಪ್ರಾಶಸ್ಱವನ್ನು ಶಾಲೆಗೆ ನೀಡದಿರುವುದು ಶೋಚನೀಯ ಸಂಗತಿ. ಮಗುವೊಂದು ಕಲಿತರೆ ಗ್ರಾಮ ಉದ್ಧಾರವಾದಂತೆ, ಆದರೆ ಶಾಲೆಗಳು ಮಾತ್ರ ದಿನದಿಂದ ದಿನಕ್ಕೆ ಹಾಳಾಗುತ್ತಿದೆ. ಅದರ ನಿರ್ವಣಕ್ಕೆ ಗ್ರಾಮದ ಜನರು ಮುಂದಾಗಬೇಕು. ಶೆಟ್ಟಿಹಳ್ಳಿ ಗ್ರಾಮದಲ್ಲಿ ಈಗಾಗಲೇ ನಾಲ್ಕು ದೇವಾಲಯಗಳಿವೆ. 5 ನೇ ದೇವಾಲಯವನ್ನಾಗಿ ಒಂದು ಶಾಲೆಯನ್ನು ನಿರ್ವಿುಸಿ. ಸರ್ಕಾರದ ಅನುದಾನಕ್ಕೆ ಕಾಯದೆ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಗ್ಯಾರಂಟಿ ಹಣವನ್ನು ಸಂಗ್ರಹಿಸಿ ಅದರಿಂದ ಕಟ್ಟಿ ಎಂದು ಜನರಿಗೆ ಕಿವಿಮಾತು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಮನುಷ್ಯನ ನಡೆ, ನುಡಿ ಭಿನ್ನವಾಗಿದ್ದು ಇವೆರಡು ಒಂದಾಗಬೇಕಾಗಿದೆ. ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣ ಮಾನವನ ಮನಸ್ಸನ್ನು ಕೆಡಿಸುತ್ತಿದೆ. ಸಾಮಾಜಿಕ ಜಾಲತಾಣವನ್ನು ಮನುಷ್ಯನ ಪ್ರಗತಿಗೆ ಬೇಕಾದ ಅಂಶಗಳನ್ನು ತಿಳಿಯಲು, ಉತ್ತಮ ಕೆಲಸಗಳಿಗೆ ಉಪಯೋಗಿಸಬೇಕು ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಶಾಸಕನಾಗಿದ್ದ ಸಂದರ್ಭದಲ್ಲಿ ಸಾಸ್ವೇಹಳ್ಳಿ ಏತನೀರಾವರಿ ಯೋಜನೆಯಲ್ಲಿ ಶೆಟ್ಟಿಹಳ್ಳಿ ಗ್ರಾಮದ ಎರಡು ಕೆರೆಗಳನ್ನು ಸೇರಿಸಿದ್ದೆ. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಅವು ಬಿಟ್ಟು ಹೋಗಿದ್ದು, ಕೆರೆಗಳನ್ನು ಯೋಜನೆಗೆ ಸೇರಿಸಲು ಈಗಿನ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಮಾತನಾಡಿ, ಕೆರೆಗಳಿಗೆ ನೀರನ್ನು ತುಂಬಿಸಲು ನೀರಾವರಿ ಯೋಜನೆಗಳು ತಾತ್ಕಾಲಿಕ ಪರಿಹಾರವಾಗಿದ್ದು ಶಾಶ್ವತವಾಗಿ ನೀರು ಹರಿದು ಬರುವಂತೆ ಮಾಡಬೇಕಾಗಿದೆ. ಪ್ರಸ್ತುತ ಕೆರೆಗಳನ್ನು ಮುಚ್ಚಿ ಮನೆ, ಜಮೀನುಗಳನ್ನು ಮಾಡಿಕೊಳ್ಳುವವರ ಸಂಖ್ಯೆ ಅಧಿಕವಾಗಿದೆ, ಅದಕ್ಕೆ ಮೊದಲು ಕಡಿವಾಣ ಹಾಕಬೇಕಾಗಿದೆ ಎಂದರು.

ಶರಣ ಸಿರಿ ಪ್ರಶಸ್ತಿ ಪುರಸ್ಕೃತ ಎಚ್.ಎಸ್. ಮಲ್ಲಿಕಾರ್ಜುನಪ್ಪ, ನಿವೃತ್ತ ಪ್ರಾಚಾರ್ಯ ಕೆ.ಎಸ್. ಈಶ್ವರಪ್ಪ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ವಕ್ತಾರ ಹೊದಿಗೆರೆ ರಮೇಶ್, ತುಮ್ೋಸ್ ಸಂಸ್ಥೆ ಮಾಜಿ ಅಧ್ಯಕ್ಷ ಆರ್.ಎಂ. ರವಿ, ಗ್ರಾಪಂ ಅಧ್ಯಕ್ಷೆ ಶ್ರುತಿ, ಪ್ರಸನ್ನಕುಮಾರ್, ಗ್ರಾಮದ ಮುಖಂಡರಾದ ದೇವೆಂದ್ರಪ್ಪ, ಗಂಗಣ್ಣ, ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net