

ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿ ಹಾಗೂ ಗುರವಂದನ ಮಹೋತ್ಸವ ಏ.1 ರಂದು ಬೆಳಗ್ಗೆ 11ಕ್ಕೆ ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಿದ್ಧತೆ ನಡೆದಿದೆ.
ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಕುಮಾರ ಶ್ರೀಗಳ ಜಯಂತಿ ಕಾರ್ಯಕ್ರಮದ ಪೂರ್ವಸಿದ್ಧತೆಗಳ ಬಗ್ಗೆ ತಿಳಿಸಿದರು.
ಸಮಾರಂಭವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಹಿಸಲಿದ್ದಾರೆ. ದಿವ್ಯ ನೇತೃತ್ವವನ್ನು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ಧಲಿಂಗಸ್ವಾಮೀಜಿ, ಮೈಸೂರು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಉಪಸ್ಥಿತರಿರುವರು.
ಕೇಂದ್ರ ಸಚಿವ ಸಚಿವ ವಿ.ಸೋಮಣ್ಣ, ಜಿಲ್ಲೆಯ ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಭಾಗವಹಿಸುವರು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ ಮತ್ತು ಎನ್.ಶ್ರೀನಿವಾಸಯ್ಯ ಭಾಗವಹಿಸುವರು ಎಂದರು.
ಶ್ರೀಸಿದ್ದಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ಮಾತನಾಡಿ, ಶ್ರೀಗಳ 118ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಪ್ರಯುಕ್ತ ಏ.1ರಂದು ಮುಂಜಾನೆಯಿಂದಲೇ ಶ್ರೀಗಳ ಗದ್ದುಗೆಯಲ್ಲಿ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಹರಗುರುಚರಮೂರ್ತಿಗಳಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದರು.
===
ಒಂದು ಲಕ್ಷ ಭಕ್ತರ ಆಗಮನ ನಿರೀಕ್ಷೆ
ಗುರುವಂದನಾ ಮಹೋತ್ಸವದ ಅಂಗವಾಗಿ 5 ಕಡೆ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದ್ದು ಲಕ್ಷಕ್ಕೂ ಹೆಚ್ಚು ಭಕ್ತರು ಏ.1ರಂದು ಶ್ರೀಮಠಕ್ಕೆ ಆಗಮಿಸಿ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ನಂತರ ಶ್ರೀಮಠದ ಆವರಣದಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಪುತ್ಥಳಿ ಮೆರವಣಿಗೆಯನ್ನು ವಿವಿಧ ಜಾನಪದ ಕಲಾ ತಂಡಗಳ ಮೇಳದೊಂದಿಗೆ ನಡೆಸಲಾಗುತ್ತಿದೆ.