

ವಿಜಯಪುರ: ಪಂಚಪೀಠಾಧೀಶರಿಗೂ ಬಸವಾದಿ ಶರಣರಿಗೂ ಯಾವುದೇ ಸಂಬಂಧವಿಲ್ಲ; ಪಂಚಪೀಠಾಧೀಶರು ಆಂದ್ರ ಮೂಲದವರಾಗಿದ್ದು ಲಿಂಗಾಯತಕ್ಕೂ ವೀರಶೈವಕ್ಕೂ ಸಂಬಂಧವಿಲ್ಲ. ಹೀಗಾಗಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವುದರ ಜೊತೆಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆಗ್ರಹಿಸಿದರು.
ಬಸವಾದಿ ಶರಣರು ವೀರಶೈವ ಪದವನ್ನೇ ಬಳಸಿಲ್ಲ. ಕೆಲವು ಸಣ್ಣಪುಟ್ಟ ವಚನಗಳನ್ನೇ ಮುಂದಿಟ್ಟುಕೊಂಡು ಶರಣರ ಆಶಯ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಬಸವಣ್ಣನವರನ್ನು ಒಪ್ಪಿಕೊಂಡು ವೀರಶೈವರ ಲಿಂಗಾಯತರೊಂದಿಗೆ ಬರುವುದಾದರೆ ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ವೀರಶೈವ ಲಿಂಗಾಯತ ಒಂದೇ ಎನ್ನುವ ಮೂಲಕ ಲಿಂಗಾಯತರ ಸ್ಥಾನಮಾನ ಕಸಿದುಕೊಳ್ಳುವ ಹುನ್ನಾರ ಸಹಿಸಲ್ಲವೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು 2013ರಲ್ಲಿ ಬಸವಜಯಂತಿಯಂದೇ ಪ್ರಮಾಣ ವಚನ ಸ್ವೀಕರಿಸಿ, 2024ರಲ್ಲಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಶ್ಲಾಘನೀಯ. ಆದರೆ, ಕೇವಲ ಭಾವನಾತ್ಮಕವಾಗಿ ಲಿಂಗಾಯತರನ್ನು ಉದ್ದೀಪನಗೊಳಿಸುವ ಬದಲು ಲಿಂಗಾಯತರಿಗೆ 2ಡಿ ಅಲ್ಪಸಂಖ್ಯಾತ ಸ್ಥಾನಮಾನದ ಮಾನ್ಯತೆ ನೀಡಲು ಕಾನೂನಿನಲ್ಲಿ ಅವಕಾಶವಿದ್ದು, ಈ ಕೂಡಲೇ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು. ಬಸವಣ್ಣನವರ ಜನಿಸಿದ ವಿಜಯಪುರ ಜಿಲ್ಲೆಯನ್ನು ಬಸವೇಶ್ವರ ಜಿಲ್ಲೆ ಎಂದು ನಾಮಕರಣ ಮಾಡಬೇಕು. ನಿರ್ಲಕ್ಷೃಕ್ಕೆ ಒಳಗಾಗಿರುವ ಶರಣರ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಬೇಕು. ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಬಸವೇಶ್ವರರ ಹೆಸರು ನಾಮಕರಣಗೊಳಿಸಬೇಕು. ಪ್ರತಿ ಬೀದಿಗಳಿಗೂ, ಬಡಾವಣೆಗಳಿಗೂ ಶರಣರ ಹೆಸರಿಡಬೇಕು ಎಂದು ಒತ್ತಾಯಿಸಿದರು.
ಶರಣರ ಸ್ಮಾರಕಗಳನ್ನು ಸಂರಕ್ಷಿಸಬೇಕು. ವಚನಗಳನ್ನು ಪರಿಚಯಿಸಬೇಕು. ಕರ್ನಾಟಕ ಏಕಮೇವ ಮಹಿಳಾ ವಿವಿಯಲ್ಲಿ ಬಸವ ಅಧ್ಯಯನ ಪೀಠ ಸ್ಥಾಪಿಸಬೇಕು. ರಾಜ್ಯದ ಯಾವುದಾದರೂ ವಿಶ್ವ ವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಬೇಕು ಮತ್ತು ಎಲ್ಲ ವಿಶ್ವ ವಿದ್ಯಾಲಯಗಳಲ್ಲಿಯೂ ಬಸವ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಅದಕ್ಕಾಗಿ ಅಪಾರ ಅನುದಾನ ನೀಡಬೇಕು. ವಚನಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಹೆಸರಿನಲ್ಲಿ ಬಸವ ತತ್ವ ಪ್ರಚಾರಕರಿಗೆ ಪ್ರಶಸ್ತಿ ನೀಡಬೇಕು. ಈ ನಿಟ್ಟಿನಲ್ಲಿ ಸಚಿವ ಎಂ.ಬಿ. ಪಾಟೀಲರು ಮುತುವರ್ಜಿ ವಹಿಸಬೇಕೆಂದರು.
ಶರಣೆ ಅಕ್ಕಮಹಾದೇವಿ ಅರೆಬೆತ್ತಲೆಯಾಗಿ ಕಲ್ಯಾಣಕ್ಕೆ ಬಂದಿಲ್ಲ ಎನ್ನುವುದಕ್ಕೆ ಹಲವು ಉಲ್ಲೇಖ ಹಾಗೂ ಪುರಾವೆಗಳಿದ್ದು, ಅಕ್ಕಮಹಾದೇವಿಯನ್ನು ಅರೆಬೆತ್ತಲೆಯಾಗಿ ಚಿತ್ರಿಸಿ ಇಡೀ ಮಾನವ ಕುಲ ತಲೆ ತಗ್ಗಿಸುವಂತೆ ಮಾಡಲಾಗಿದೆ. ಇದು ಶರಣರಿಗೆ ಮತ್ತು ಅಕ್ಕಮಹಾದೇವಿಗೆ ಮಾಡಿದ ಅಪಮಾನ. ಹೀಗಾಗಿ ಕೂಡಲೇ ಅಕ್ಕಮಹಾದೇವಿ ವಿಶ್ವ ವಿದ್ಯಾಲಯದ ಎದುರು ಇರುವ ಅರೆಬೆತ್ತಲೆಯ ಅಕ್ಕಮಹಾದೇವಿ ಪುತ್ಥಳಿ ತೆಗೆದು ಆ ಸ್ಥಳದಲ್ಲಿ ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕಮಹಾದೇವಿಯ ಪುತ್ಥಳಿ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ವಿ.ಸಿ. ನಾಗಠಾಣ, ಜಂಬುನಾಥ ಕಂಚ್ಯಾಣಿ, ಆರ್.ಎಸ್. ಬಿರಾದಾರ, ಡಾ.ಸರಸ್ವತಿ ಪಾಟೀಲ, ಬಸಮ್ಮ ಭರಮಶೆಟ್ಟಿ, ಮ.ಗು. ಯಾದವಾಡ, ಈರಣ್ಣ ತೊಂಡಿಕಟ್ಟಿ, ಸಿದ್ಧಪ್ಪ ಪಟ್ಟಣ ಮತ್ತಿತರರಿದ್ದರು.