

ಹುಬ್ಬಳ್ಳಿ : ಹೋರಾಟದ ಬದುಕು ರೂಪಿಸಿಕೊಂಡಿರುವ ಡಾ. ಕೆ.ಎಸ್. ಶರ್ಮಾ ಅವರು ಸಾವಿರಾರು ಜನರ ಬಾಳಿಗೆ ಬೆಳಕಾಗಿದ್ದಾರೆ. ಸಾಹಿತ್ಯಕ ಚಟುವಟಿಕೆ ಜತೆಗೆ ಹೋರಾಟದ ಮೂಲಕ ಹಲವಾರು ಸಮಸ್ಯೆಗಳನ್ನು ನಿವಾರಿಸಿದ್ದಾರೆ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಇಲ್ಲಿನ ಗೋಕುಲ ರಸ್ತೆ ಬಸವೇಶ್ವರ ನಗರದ ವಿಶ್ವಶ್ರಮ ಚೇತನ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದಿಂದ ಡಾ. ಕೆ.ಎಸ್. ಶಮಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿನಗೂಲಿ ನೌಕರರ ವಿಮೋಚನಾ ಶಿಲ್ಪಿ ಡಾ. ಕೆ.ಎಸ್. ಶಮಾ ಅವರ 92ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆ.ಎಸ್. ಶರ್ಮಾ ಅವರು ದಿನಗೂಲಿ ನೌಕರರ ಕಾಯಂ ಆತಿಗೆ ನಿರಂತರವಾಗಿ ಹೋರಾಡಿದ್ದರು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದಿನಗೂಲಿ ನೌಕರರ ಕಾಯಂ ಗಾಗಿ ಬಿಲ್ ಪಾಸ್ ಮಾಡಲಾಯಿತು. ಆದರೆ, ನಿವೃತ್ತಿ ವೇತನದ ಸಮಸ್ಯೆ ಹಾಗೆಯೇ ಉಳಿಯಿತು ಎಂದರು.
ಇದೀಗ ಹೊರ ಗುತ್ತಿಗೆದಾರರು ಮತ್ತು ಅಂಗವಿಕಲರ ನೌಕರಿ ಕಾಯಂಗಾಗಿ ಕೆ.ಎಸ್. ಶರ್ಮಾ ಹೋರಾಡುತ್ತಿದ್ದಾರೆ. ಹೊರ ಗುತ್ತಿಗೆ ನೌಕರರ ಮೇಲೆ ಶೋಷಣೆ ನಡೆಯುತ್ತಿದೆ. ಇದಕ್ಕೆ ಶರ್ಮಾ ಅವರ ಹೋರಾಟದಿಂದ ರ್ತಾಕ ಅಂತ್ಯ ಸಿಗಬೇಕು ಎಂದು ಹೇಳಿದರು.
ಶರ್ಮಾ ಅವರ ವ್ಯಕ್ತಿತ್ವ ಎಲ್ಲವನ್ನೂ ಮೀರಿದ್ದು. ಯಾವುದೇ ಪ್ರಶಸ್ತಿಗೆ ಅವರನ್ನು ಹೋಲಿಸುವುದು ಸರಿಯಲ್ಲ. ಜನಸಾಮಾನ್ಯರ ಹೃದಯದಲ್ಲಿ ಅವರಿದ್ದಾರೆ. ಅದೇ ದೊಡ್ಡ ಪ್ರಶಸ್ತಿ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಪ್ರಗತಿಪರ ಚಿಂತಕ ಡಾ. ಕೆ.ಎಸ್. ಶರ್ಮಾ ಅವರು ದಿನಗೂಲಿ ನೌಕರರಿಗೆ ಬದುಕು ಕಟ್ಟಿಕೊಟ್ಟರು. ನಾನು ರಾಜಕೀಯವಾಗಿ ಗುರುತಿಸಿಕೊಂಡಿದ್ದೇ ಅವರಿಂದ ಎಂದು ಹೇಳಿದರು.
ಡಾ. ಕೆ.ಎಸ್. ಶರ್ಮಾ ಅವರುಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಬಸವ ಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ, ಇದುವರೆಗೆ ಅಂದಾಜು 36ಲಕ್ಷ ಜನರಿಗೆ ಉದ್ಯೋಗ ಕೊಡಿಸಿದ್ದಾರೆ. ಇಂತಹ ಕೆಲಸ ದೇಶದಲ್ಲಿ ಯಾರೂ ಮಾಡಿಲ್ಲ ಎಂದು ತಿಳಿಸಿದರು.
ಸವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಮಾತನಾಡಿ, ಯುವಕರು ಡಾ. ಶರ್ಮಾ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಭಿನಂದನಾ ಗ್ರಂಥ ‘ಬೆಳಗೊಳಗಣ ಮಹಾಬೆಳಗು’ ಹಾಗೂ ದ.ರಾ. ಬೇಂದ್ರೆ ಅವರ ಪುನರ್ ಮುದ್ರಣಗೊಂಡಿರುವ ’ನಾಕುತಂತಿ’ ಕವನ ಸಂಗ್ರಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಭಾರತ ಏಕತಾ ಆಂದೋಲನ ಮತ್ತು ಬಸವ ಶಾಂತಿ ಮಿಷನ್ ಸಂಘಟನೆ ವತಿಯಿಂದ ಕೆ.ಎಸ್. ಶಮಾ ಅವರಿಗೆ ‘ಶ್ರಮಜೀವಿಗಳ ರತ್ನ’ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ರಂಜಾನ ದರ್ಗಾ, ವಿಜ್ಞಾನಿ ಎಂ. ಬಾಪೂಜಿ, ಮಾಜಿ ಸಂಸದ ಐ.ಜಿ. ಸನದಿ ಹಾಗೂ ಇತರರು ಇದ್ದರು. </p><p>ಡಾ. ಶ್ರೀನಿವಾಸ ಬನ್ನಿಗೋಳ ಸ್ವಾಗತಿಸಿದರು. ಸುಲೋಚನಾ ಪೋತ್ನೀಸ್ ನಿರೂಪಿಸಿದರು. ಡಾ. ಸಿ.ಸಿ. ಹಿರೇಮಠ ವಂದಿಸಿದರು.