ಡಾ. ಶಂಬಾ ಜೋಷಿ, ಡಾ. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

2 smg 5
ಕರ್ನಾಟಕ ಸಂಘದಿಂದ ಡಾ.ವೈ.ಸಿ.ಭಾನುಮತಿ ಅವರಿಗೆ ಡಾ.ಶಂಬಾ.ಜೋಷಿ ಪುರಸ್ಕಾರ ಹಾಗೂ ಡಾ.ಎ.ಪಿ.ಚಂದ್ರಶೇಖರ್ ಅವರಿಗೆ ಡಾ.ಶಿವರಾಮ ಕಾರಂತ ವಿಜ್ಞಾನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಂ.ಎನ್.ಸುಂದರರಾಜ್, ಪ್ರೊ.ಎಂ.ಆಶಾಲತಾ, ವಿನಯ್, ಮೋಹನ್ ಶಾಸ್ತ್ರಿ, ಆ.ಶ್ರೀ.ಆನಂದ, ಡಾ.ಕೆ.ರವೀಂದ್ರನಾಥ ಉಪಸ್ಥಿತರಿದ್ದರು.
Published on

ಶಿವಮೊಗ್ಗ: ಪ್ರಸ್ತುತ ಸಂದರ್ಭದಲ್ಲಿ ಸಮರ್ಪಕವಾಗಿ ಹಸ್ತಪ್ರತಿ ಸಂಪಾದನೆ ಮಾಡಿದರೆ ರಾಜ್ಯದಲ್ಲಿ ಇನ್ನೂ 25 ಸಾವಿರ ಹಸ್ತಪ್ರತಿಗಳು ದೊರೆಯುತ್ತವೆ. ಹಸ್ತಪ್ರತಿಗಳು ಕವಿ, ಕಾಲ ನಿರ್ಣಯಕ್ಕೆ ಪೂರಕ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಕೆ.ರವೀಂದ್ರನಾಥ ಅಭಿಪ್ರಾಯಪಟ್ಟರು.
ಕರ್ನಾಟಕ ಸಂಘದಲ್ಲಿ ಶನಿವಾರ ಡಾ. ಶಂಬಾ ಜೋಷಿ ಪುರಸ್ಕಾರಕ್ಕೆ ಪಾತ್ರವಾದ ಮೈಸೂರಿನ ಡಾ. ವೈ.ಸಿ.ಭಾನುಮತಿ ಸಾಧನೆ ಕುರಿತು ಮಾತನಾಡಿ, ಅತ್ಯಂತ ಉಪೇಕ್ಷಿತ ಕ್ಷೇತ್ರ ಎನಿಸಿರುವ ಹಸ್ತಪ್ರತಿ ಸಂಗ್ರಹ, ಸಂಪಾದನೆ ಕ್ಷೇತ್ರದಲ್ಲಿ ಭಾನುಮತಿ ಅವರು ಮಾಡಿದ ಸಾಧನೆ ಅಪರೂಪದ್ದು. ಅನೇಕ ಕವಿಗಳನ್ನು ಅವರು ಪರಿಚಯಿಸಿದ್ದಾರೆ ಎಂದರು.
ಹಸ್ತಪ್ರತಿ ಸಂಪಾದನೆ, ಪ್ರಕಟಣೆ ತುಂಬಾ ಪರಿಶ್ರಮದ ಕಾರ್ಯ. ಆರಂಭದ ದಿನಗಳಲ್ಲಿ ಈ ಕ್ಷೇತ್ರದಲ್ಲಿದ್ದ ಘಟಾನುಘಟಿಗಳ ನಡುವೆಯೂ ಭಾನುಮತಿ ಅವರು ತೋರಿದ ಕಾರ್ಯಕ್ಷಮತೆ ಅನುಕರಣೀಯ. ಓರ್ವ ಮಹಿಳೆಯಾಗಿ ಅವರು ಸಂಶೋಧನೆಗೆ ಭಿನ್ನವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದೇ ವಿಶೇಷ ಎಂದು ಹೇಳಿದರು.
ಇಂದು ಸರಿಯಾಗಿ ಸರ್ವೇಕ್ಷಣೆ ಮಾಡಿದರೆ ರಾಜ್ಯದಲ್ಲಿ ಇನ್ನೂ ಒಂದು ಲಕ್ಷ ಕವಿಗಳು ಹೊಸದಾಗಿ ಸೇರ್ಪಡೆಯಾಗುತ್ತಾರೆ. ಕರ್ನಾಟಕದ ಕವಿಗಳ ಸಾಹಿತ್ಯ ಪರಿಷ್ಕರಣೆಗೆ ಇದು ಸಕಾಲ. 55 ಕೃತಿಗಳನ್ನು ಪರಿಷ್ಕರಣೆ ಮಾಡುವ ಮೂಲಕ ಭಾನುಮತಿ ಕನ್ನಡ ಸಾಹಿತ್ಯ ಲೋಕಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಇದೇ ಕಾರಣಕ್ಕೆ ಕನ್ನಡ ವಿದ್ವತ್ ಲೋಕದಲ್ಲಿ ಅವರು ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೃಜನಶೀಲ ಸಾಹಿತ್ಯದಲ್ಲಿ ಕೃಷಿ ನಡೆಸಿ ಪ್ರಶಸ್ತಿ ಪಡೆಯುವವರ ಸಂಖ್ಯೆ ಬಹಳಷ್ಟಿದೆ. ಆದರೆ ಕರ್ನಾಟಕ ಸಂಘ ಹಸ್ತಪ್ರತಿ ಹಾಗೂ ಸಾವಯವ ಕೃಷಿಯ ಕುರಿತು ಸಾಹಿತ್ಯ ರಚಿಸಿದವರನ್ನೂ ಗುರುತಿಸಿ ಅವರನ್ನು ಪುರಸ್ಕರಿಸುತ್ತಿರುವುದು ವಿಶೇಷ ಎಂದರು.
ಡಾ. ಶಿವರಾಮ ಕಾರಂತ ವಿಜ್ಞಾನ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಕೃಷಿ ವಿಜ್ಞಾನಿ ಹಾಗೂ ಸಾಹಿತಿ ಡಾ. ಎ.ಪಿ.ಚಂದ್ರಶೇಖರ್ ಕುರಿತು ಮಾತನಾಡಿದ ಸಾವಯವ ಕೃಷಿ ಮಿಷನ್ ಮಾಜಿ ಅಧ್ಯಕ್ಷ ಆ.ಶ್ರೀ.ಆನಂದ, ಪಹಣಿಯಲ್ಲಿ ಹೆಸರು ಇದೆ ಎಂಬ ಕಾರಣಕ್ಕೆ ರೈತ ಎನಿಸಿಕೊಳ್ಳುತ್ತಿರುವವರೇ ಹೆಚ್ಚು. ಭೂಮಿಯಲ್ಲಿ ತಾಯಿ ಸ್ವರೂಪ ಕಂಡವರು. ಕೃಷಿಯ ಮೂಲಕ ಹೊಸ ಪಾಠ ಕಲಿತವರು, ಕೃಷಿಗೆ ಹೊಸ ವ್ಯಾಖ್ಯಾನ ನೀಡಿದವರು ನಿಜವಾದ ರೈತರು ಎಂದು ಅಭಿಪ್ರಾಯಪಟ್ಟರು.
ವಿಜ್ಞಾನ, ಸಾಹಿತ್ಯ, ಶಿಕ್ಷಣ, ಅನುಭಾವ ಎಲ್ಲವೂ ಕೃಷಿ ಕ್ಷೇತ್ರದಲ್ಲಿದೆ. ಅದನ್ನು ಡಾ. ಎ.ಪಿ.ಚಂದ್ರಶೇಖರ್ ತಮ್ಮ ಕಾರ್ಯ ಹಾಗೂ ಕೃತಿಯ ಮೂಲಕ ನಿರೂಪಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net