ಅಭಿವೃದ್ಧಿ ಕೆಲಸ ನಿರ್ಲಕ್ಷಿಸಿದರೆ ಸಹಿಸುವುದಿಲ್ಲ

Shailendr beldale
Published on

ಚಿಟಗುಪ್ಪ: ಅಭಿವೃದ್ಧಿ ಕಾರ್ಯ ಚುರುಕಿನಿಂದ ಮಾಡುವ ಜತೆಗೆ ಜನರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ವಿನಾಕಾರಣ ನಿರ್ಲಕ್ಷಿಸಿದರೆ ಸಹಿಸುವುದಿಲ್ಲ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಎಚ್ಚರಿಸಿದರು.
ಚಾಂಗಲೇರಾದ ಶ್ರೀ ವೀರಭದ್ರೇಶ್ವರ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀದರ್ ದಕ್ಷಿಣ ಕ್ಷೇತ್ರದ ಚಿಟಗುಪ್ಪ ತಾಲೂಕಿನ ಗ್ರಾಮಗಳ ಪ್ರಥಮ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಶೈಕ್ಷಣಿಕವಾಗಿ ಈ ಭಾಗದ ಮಕ್ಕಳು ಪ್ರಗತಿ ಹೊಂದಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ ಅಧೀನ ಸಿಬ್ಬಂದಿಯೊಂದಿಗೆ ಶಾಲೆಗಳಿಗೆ ಭೇಟಿ ನೀಡಿ ಶಿಥಿಲ ಶಾಲೆ ಮತ್ತು ಸೌಲಭ್ಯಗಳ ಅಗತ್ಯ ಕುರಿತ ಮಾಹಿತಿ ನೀಡುವಂತೆ ಸೂಚಿಸಿದರು. ಶಿಕ್ಷಕರ ಕೊರತೆ ಇದ್ದಲ್ಲಿ ಕೂಡಲೇ ಭರ್ತಿ ಮಾಡಿ ಉತ್ತಮ ಫಲಿತಾಂಶ ಬರುವಂತೆ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಅರಣ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಸಸಿಗಳನ್ನು ಬೆಳೆಸಲು ನರ್ಸರಿ ಮಾಡಲು ಪ್ರಸ್ತಾವನೆ ಕಳುಹಿಸಿ ಮಾಹಿತಿ ನೀಡಿ ಎಂದು ಅರಣ್ಯಾಧಿಕಾರಿ ಶಿವಕುಮಾರಗೆ ಸೂಚಿಸಿದ ಅವರು, ಈ ಭಾಗದಲ್ಲಿ ಸಾಕಷ್ಟು ಜನರು ಸಿ ಫಾರ್ಮ್ ಹೊಂದಿದ್ದು, ಅವರ ಭೂಮಿ ಪಹಣಿಯಲ್ಲಿ ಅರಣ್ಯ ಇಲಾಖೆ ಎಂದು ಬಂದಿದ್ದಕ್ಕೆ ಗೋಳು ತೋಡಿಕೊಳ್ಳುತ್ತಿದ್ದಾರೆ. ಅರಣ್ಯ, ಕಂದಾಯ ಅಧಿಕಾರಿಗಳು ವಿಶೇಷ ಗಮನಹರಿಸಿ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದರು.
ಕೃಷಿ, ತೋಟಗಾರಿಕೆ, ಜೆಸ್ಕಾಂ, ಆರೋಗ್ಯ, ಜಿಪಂ, ಲೋಕೋಪಯೋಗಿ, ಸಾರಿಗೆ, ರೇಷ್ಮೆ, ಕಂದಾಯ, ಪೊಲೀಸ್, ಅಬಕಾರಿ ಸೇರಿ ಇತರ ವಿವಿಧ ಇಲಾಖೆ ಪ್ರಗತಿ ಕುರಿತು ಚರ್ಚಿಸಿದರು. ಪ್ರಗತಿ ಕುರಿತು ಅಧಿಕಾರಿಗಳು ನಿತ್ಯ ಮಾಹಿತಿ ನೀಡಬೇಕು. ತೊಂದರೆ ಇದ್ದರೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಭೆಗೆ ಹಾಜರಾಗದ ಹಾಗೂ ಮುಂಚಿತವಾಗಿ ಪ್ರಗತಿ ವರದಿ ನೀಡದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕ ಬೆಲ್ದಾಳೆ, ತಾಪಂ ಇಒ ಅಕ್ರಂ ಪಾಷಾ ಅವರಿಗೆ ಸೂಚಿಸಿದರು. ತಾಪಂ ಆಡಳಿತಾಧಿಕಾರಿ ಶರಣಯ್ಯ ಮಠಪತಿ, ತಾಲೂಕು ಅನುಷ್ಠಾನ ಅಧಿಕಾರಿಗಳು, ಪಿಡಿಒಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net