ಡಾ. ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಮನವಿ

VMS 13-4
Published on

ವಿಜಯಪುರ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಪದಾಧಿಕಾರಿಗಳು ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಗುರುರಾಜ ಸೊಲ್ಲಾಪುರ ಮಾತನಾಡಿ, ಡಾ. ಮಹಿಷಿ ವರದಿಯಂತೆ ಎಲ್ಲ ಸರ್ಕಾರಿ ಸಂಸ್ಥೆಗಳು ಹಾಗೂ ಸಾರ್ವಜನಿಕರ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಶೇ. 100 ರಷ್ಟು ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರಿ ಘಟಕಗಳ ಗ್ರುಪ್-ಬಿ ನೌಕರರಲ್ಲಿ ಕನ್ನಡಿಗರಿಗೆ ಶೇ.80ರಷ್ಟು, ಗ್ರುಪ್-ಎಯಲ್ಲಿ ಶೇ.65ರಷ್ಟು ಹಾಗೂ ಖಾಸಗಿ ಮತ್ತು ಸರ್ಕಾರಿ ಕೈಗಾರಿಕಾ ಘಟಕಗಳ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು. ಈ ವರದಿ ಬೇಗ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಗೌರವಾಧ್ಯಕ್ಷ ಸಂಜಯ ಮುದ್ದೇಬಿಹಾಳ, ಸಂಕೇತ ಪಟ್ಟಣದ, ಪ್ರಕಾಶ ಇಂಡಿ, ಬಸವರಾಜ ಪಾಟೀಲ, ಅಬ್ಬಾಸ್‌ಅಲಿ ಮುಲ್ಲಾ, ಜಯಶ್ರೀ ಚವಾಣ್, ಬೌರವ್ವ ಶಿವಪುರ, ಜಯದೇವ ಸೂರ್ಯವಂಶಿ, ವಿನೋದ ಸಾಳುಂಕೆ, ವಿನಾಯಕ ಹೊಸಮನಿ, ಪ್ರಶಾಂತ ಗಿರಗಾಂವ, ಬಸವರಾಜ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ವಿಶ್ವ ನಿರ್ಮಾಣ ಸೇನೆ: ಸಂಘಟನೆಯ ಉ-ಕ ಪ್ರಧಾನ ಕಾರ್ಯದರ್ಶಿ ಎಸ್.ಕೆ. ನಿಡಗುಂದಿ ನೇತೃತ್ವದಲ್ಲಿ ಡಾ.ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿಜಯ ಲಿಂಗದಳ್ಳಿ, ಮಂಜುಳಾ ಜಾಧವ, ರಾಜೇಶ್ವರಿ ಕಲಾಲ, ಸಚಿನ್ ಭೋಸಲೇ, ಹುಸೇನ್ ಅರಬ್, ಪ್ರೀತಂ ಡೋಣಿ, ಮೋಸಿನಾ ಕಲಾದಗಿ ಮತ್ತಿತರರು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net