ಡಾ. ಜ್ಞಾನ ಸ್ವರೂಪಾನಂದ ಸ್ವಾಮೀಜಿಗೆ ಸನ್ಯಾಸ ದೀಕ್ಷೆ

13
Published on

ಮೈಸೂರು: ಆದಿಕರ್ನಾಟಕ (ಚಲವಾದಿ) ಮಹಾಸಂಸ್ಥಾನ ಗುರುಪೀಠದ ನೂತನ ಪೀಠಾಧಿಪತಿಯಾಗಿ ಡಾ. ಜ್ಞಾನ ಸ್ವರೂಪಾನಂದ ಸ್ವಾಮೀಜಿ ಅವರಿಗೆ ಸೋಮವಾರ ಸನ್ಯಾಸ ದೀಕ್ಷೆ ಕಾರ್ಯಕ್ರಮ ನೆರವೇರಿತು.
ನಗರದ ಅಶೋಕ ವೃತ್ತದ ಬಳಿ ಇರುವ ಗೌತಮಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖಂಡರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ನಡೆಯಿತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಯೋಗ ಅಧ್ಯಯನ ವಿಭಾಗದ ಸಂಯೋಜಕರಾಗಿ ಸ್ವಾಮೀಜಿ ಕಾರ್ಯ ನಿರ್ವಹಿಸಿದ್ದರು.
ಸನ್ಯಾಸತ್ವ ದೀಕ್ಷೆ ಪಡೆದ ಬಳಿಕ ಡಾ. ಜ್ಞಾನ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಕರ್ನಾಟಕದಾದ್ಯಂತದ ತಿರುಗಾಡಿ ಅನುಭವಗಳನ್ನು ಗಳಿಸಿಕೊಂಡಿರುವುದನ್ನು ಸಮಾಜದ ಶ್ರೇಯೋಭಿವೃದ್ಧಿಗೆ ಬಳಸುತ್ತೇವೆ. ಕಲ್ಯಾಣ ಕಾರ್ಯಕ್ರಮಳಿಗೆ ಸಮಾಜದ ಮಾರ್ಗದರ್ಶನ ಅಗತ್ಯ ನಮ್ಮ ಸಮಾಜದ ಏಳಿಗೆಗೆ ಬೇಕಾದ ಪೂರಕ ವಾತಾವರಣ ನಿರ್ಮಾಣ ಮಾಡಲು ಮಠದಿಂದ ಶ್ರಮಿಸಲಾಗುತ್ತದೆ ಎಂದು ತಿಳಿಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸ್ವಾಮೀಜಿಗೆ ನಮ್ಮಿಂದ ಆಗುವ ಎಲ್ಲ ಸಹಾಯ ಸಹಕಾರ ನೀಡಲಾಗುವುದು. ನಮ್ಮ ಸಮಾಜದ ಉದ್ಧಾರಕ್ಕಾಗಿ ಸ್ವಾಮೀಜಿ ತಮ್ಮ ಜ್ಞಾನದ ಬೆಳಕನ್ನು ನೀಡುತ್ತಾರೆ. ನಮ್ಮೆಲ್ಲರಿಗೂ ಅರಿವು ಮೂಡಿಸುವ ಕೆಲಸ ಮಾಡುತ್ತಾರೆ ಎಂದು ವಿಶ್ವಾಸದ ನುಡಿಗಳನ್ನಾಡಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ರಾಮಸ್ವಾಮಿ, ಗೋವಿಂದ ರಾಜು, ಸಿದ್ದರಾಜು ಮತ್ತಿತರರು ಸ್ವಾಮೀಜಿ ಅವರನ್ನು ಗೌರವಿಸಿದರು. ಜ್ಞಾನ ಸ್ವರೂಪನಂದ ಅವರ ಪೂರ್ವಾಶ್ರಮದ ತಾಯಿ ಪುಟ್ಟಸಿದ್ದಮ್ಮ ಸೇರಿದಂತೆ ಹಲವರು ಮಂದಿ ಸನ್ಯಾಸ ಸ್ವೀಕಾರ ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net