

ವಿಜಯವಾಣಿ ಸುದ್ದಿಜಾಲ ಕಲಘಟಗಿ
ಹನ್ನೆರಡನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಜಾತಿ ಮತ್ತು ಲಿಂಗ ಭೇದ ಮಾಡದೇ ಸರ್ವರಿಗೂ ಸಮಾನತೆ ನೀಡಿದವರು ವಿಶ್ವಗುರು ಬಸವಣ್ಣನವರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಂಗಮನಾಥ ಲೋಕಾಪುರ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಧಾರವಾಡ, ತಾಲೂಕು ಘಟಕ ಕಲಘಟಗಿ, ಶರಣರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಹಿರೇಹೊನ್ನಿಹಳ್ಳಿಯ ಅನುಭವ ಮಂಟಪದಲ್ಲಿ ಇತ್ತೀಚೆಗೆ ಜರುಗಿದ ದತ್ತಿ ಉಪನ್ಯಾಸ ಹಾಗೂ ವಚನ ಶ್ರಾವಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬಸವಣ್ಣನವರು ಹಾಗೂ ಶರಣರು ಎಲ್ಲರಿಗೂ ತಿಳಿಯುವ ಸರಳ ಭಾಷೆ ಕನ್ನಡದಲ್ಲಿಯೇ ವಚನ ರಚಿಸಿದ್ದಾರೆ. ಬಸವಣ್ಣನವರ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಆದರ್ಶಮಯವಾಗುತ್ತದೆ ಎಂದರು. ಅನುಭವ ಮಂಟಪ ಅಧ್ಯಕ್ಷ ಗುರುಲಿಂಗ ಉಣಕಲ್ಲ ಮಾತನಾಡಿದರು.
ಶಿಕ್ಷಕ ಬಸವರಾಜ ದೇಸೂರ ವಚನ ದರ್ಶನ ಕುರಿತು ಉಪನ್ಯಾಸ ನೀಡಿ, ಶರಣರ ವಚನಗಳನ್ನು ಎಲ್ಲರಿಗೂ ಸರಳವಾಗಿ ತಲುಪಿಸುವುದೇ ಈ ಉಪನ್ಯಾಸಗಳ ಉದ್ದೇಶವಾಗಿದೆ. ಶಾಲಾ ಮಕ್ಕಳಿಗೆ ವಚನಗಳ ಸಾರ ತಿಳಿಸಿ ಒಳ್ಳೆಯ ಮಾರ್ಗ ತೋರಿಸಿಕೊಡಬೇಕೆಂದರು.
ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಾಗೂ ತಾಲೂಕು ಕಾ.ನಿ.ಪ ಸಂಘದ ಅಧ್ಯಕ್ಷ ಪ್ರಕಾಶ ಲಮಾಣಿ, ವಿರೇಶ ಹಾರೊಗೇರಿ, ಉದಯ ಗೌಡರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ರಾಮು ಮೂಲಗಿ, ಬಸವರಾಜ ಸಂಗಣ್ಣವರ, ಗುರುಸಿದ್ದಪ್ಪ ಬಡಿಗೇರ, ಎಚ್.ಎಚ್.ನದಾಫ, ನಿರಂಜನ ಯಲಿವಾಳ, ಮಲ್ಲಪ್ಪ ಹಾದಿಮನಿ, ಶ.ಸಾ.ಪ. ಗೌರವಾಧ್ಯಕ್ಷ ಅಶೋಕ ಶಿಲವಂತರ, ಕಾರ್ಯದರ್ಶಿ ಗಿರೀಶ ಮುಕ್ಕಲ್ಲ, ರಾಜಶೇಖರ ಶೀಲವಂತರ, ದತ್ತಿದಾನಿಗಳ ಕುಟುಂಬ ವರ್ಗ, ಹಿರೇಹೊನ್ನಿಹಳ್ಳಿ ಬಸವತತ್ವ ಲಿಂಗಾನುಭಾವಿ ಶರಣರ ಬಳಗ ಅನುಭವ ಮಂಟಪ ಹಾಗೂ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಸರ್ವ ಸದಸ್ಯರು ಉಪಸ್ಥಿತರಿದ್ದರು. ನೀಲಪ್ಪ ಹಿರೇಗುಂಜಳ ಪ್ರಾರ್ಥಿಸಿದರು. ನೀಲಪ್ಪ ಮುತ್ತಗಿ ನಿರೂಪಿಸಿದರು.