

ವಿಜಯವಾಣಿ ಸುದ್ದಿಜಾಲ ವಿಜಯಪುರ
ಮಹಿಳೆಯರ ಬೆಳವಣಿಗೆ ನಿಟ್ಟಿನಲ್ಲಿ ಸ್ಥಾಪಿತವಾದ ಮಹಿಳಾ ವಿವಿಯು ಮುಂದಿನ ದಿನಗಳಲ್ಲಿ ಸಾವಿರಾರು ಮಹಿಳೆಯರ ಬದುಕು ರೂಪಿಸುವ ಮೂಲಕ ಶಿಕ್ಷಣದ ಬೆಳಕನ್ನು ಹರಡಲಿ ಎಂದು ಡಾ. ಎಸ್.ಎಂ. ಜಾಮದಾರ ಹೇಳಿದರು.
ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ ಹಾಗೂ ವಸತಿ ನಿಲಯಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ದಿನಾಚರಣೆ&2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳಾ ವಿವಿ ಕೇವಲ 10 ವಾರಗಳ ಅಂತರದಲ್ಲಿ ಸ್ಥಾಪಿತವಾಯಿತು ಎಂಬುದು ಇತಿಹಾಸ. ವಿವಿ ಸ್ಥಾಪನೆಯ ಆದೇಶ ನನಗೆ ದೊರೆತಾಗ, ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಮಹತ್ವಪೂರ್ಣ ಗುರಿ ಸಾಧಿಸಬೇಕು ಎಂಬ ದೃಢ ನಿಶ್ಚಯದ ಮೂಲಕ ಕಾರ್ಯ ಪ್ರವೃತ್ತನಾದೆ. ಯಾವ ದೇಶದಲ್ಲಿ ಮಹಿಳೆಗೆ ಶಿಕ್ಷಣ ಸಿಗುವುದಿಲ್ಲವೋ, ಆ ದೇಶದಲ್ಲಿ ಸುಧಾರಣೆ ಸಾಧ್ಯವಿಲ್ಲ. ನಾವು ಮಾಡುವ ಕೆಲಸಗಳು ಕಾಲಾನಂತರದಲ್ಲಿ ಮರೆಯಾಗಬಹುದಾದರೂ, ನಾವು ಕಟ್ಟಿದ ಶಿಕ್ಷಣ ಸಂಸ್ಥೆಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತವೆ ಎಂದರು.
ಕುವೆಂಪು ವಿವಿ ಕನ್ನಡ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಮಾತನಾಡಿ, ಅಕ್ಕಮಹಾದೇವಿ ಹೆಸರಿನ ಈ ಮಹಾವಿದ್ಯಾಲಯ ಎಲ್ಲಾ ಮಹಿಳೆಯರಿಗೂ ಪೌರುಷ ಮತ್ತು ಸ್ಫೂರ್ತಿಯ ಸಂಕೇತವಾಗಿದೆ. ಮಹಿಳೆಯರ ಕಾರ್ಯಕ್ಷಮತೆ ಇಂದು ಎಲ್ಲ ೇತ್ರಗಳಲ್ಲೂ ಬೆಳಗುತ್ತಿದೆ. ಮಹಿಳೆಯರು ಕೇವಲ ಮನೆ ಕೆಲಸಗಳಿಗೆ ಸಿಮೀತವಾಗದೇ, ಸಮಾಜದ ಮುಂದಾಳುತ್ವದ ಹುದ್ದೆಗೂ ತಲುಪಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿ, ಶಿಕ್ಷಣ, ಸಮುದಾಯ ಮತ್ತು ಮಹಿಳಾ ಸಬಲಿಕರಣ ಎಂಬ ತ್ರಿವರ್ಣ ಧ್ಯೇಯದೊಂದಿಗೆ ಪ್ರಾರಂಭವಾದ ಈ ವಿಶ್ವವಿದ್ಯಾಲಯವೂ, ಸದ್ಯ ಸಾವಿರಾರು ವಿದ್ಯಾರ್ಥಿನಿಯರ ಜೀವನ ಬೆಳಗುತ್ತಿದೆ ಎಂದರು.
ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಸ್ವಾಗತಿಸಿದರು. ಡಾ. ಅಕ್ಷಯ ಯಾರ್ದಿ, ಡಾ. ಕಲಾವತಿ ಕಾಂಬಳೆ ಹಾಗೂ ಡಾ. ತಹಮೀನಾ ಕೋಲಾರ ಪರಿಚಯಿಸಿದರು. ಡಾ. ಸುರೇಖಾ ರಾಠೋಡ ಬಹುಮಾನ ವಿತರಣೆ ನಿರ್ವಹಿಸಿದರು. ಪ್ರೊ. ಲಕ್ಷಿ$್ಮದೇವಿ ವೈ. ವಾರ್ಷಿಕ ವರದಿ ಹಾಗೂ ಡಾ. ವಿಶ್ವನಾಥ ನಡಕಟ್ಟಿ ಕ್ರೀಡಾ ವರದಿ ವಾಚಿಸಿದರು. ಹನುಮಂತಯ್ಯ ಪೂಜಾರ ನಿರೂಪಿಸಿದರು. ಪ್ರೊ. ಜ್ಯೋತಿ ಉಪಾಧ್ಯೆ ವಂದಿಸಿದರು.
ಸಾಂಸತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಿವೈಎಸ್ಪಿ ಬಸವರಾಜ ಯಲಿಗಾರ, ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ, ಸಿಂಡಿಕೇಟ್ ಸದಸ್ಯರಾದ ಡಾ. ರಿಹಾನಾ ಜಬೀನ್, ಮಲ್ಲಮ್ಮ ಯಾಳವಾರ ಮತ್ತಿತರರಿದ್ದರು.
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಎಸ್.ಎಂ. ಜಾಮದಾರ ಮಾತನಾಡಿದರು.