ಡಾ.ಎಸ್.ಎಲ್.ಭೈರಪ್ಪ ಪುಸ್ತಕ ಒಂದಕ್ಕೊಂದು ಭಿನ್ನ

ಡಾ.ಎಸ್.ಎಲ್.ಭೈರಪ್ಪ ಪುಸ್ತಕ ಒಂದಕ್ಕೊಂದು ಭಿನ್ನ
Published on

ಹಾಸನ: ಡಾ.ಎಸ್.ಎಲ್.ಭೈರಪ್ಪ ಅವರು ವಾಸ್ತವಿಕತೆ ಅರಿತು, ಘಟನೆಗಳನ್ನು ಅನುಭವಿಸಿ ಕಥೆ ಕಾದಂಬರಿಯನ್ನು ರಚಿಸುತ್ತಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಅಭಿಪ್ರಾಯಪಟ್ಟರು.

ನಗರದ ಅಕ್ಷರ ಬುಕ್ ಹೌಸ್‌ನಲ್ಲಿ ಇತ್ತೀಚೆಗೆ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ.ಎಸ್.ಎಲ್.ಭೈರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದರು.

ಭೈರಪ್ಪ ಅವರ ಪ್ರತಿಯೊಂದು ಪುಸ್ತಕ ಒಂದೊಂದು ಮುತ್ತಿನ ಹವಳದಂತೆ ಇವೆ. ಒಂದು ಪುಸ್ತಕಗಳಿಗಿಂತ ಮತ್ತೊಂದು ಪುಸ್ತಕಗಳು ಹೆಚ್ಚು ಭಿನ್ನವಾಗಿವೆ. ಓದುಗನಿಗೆ ಯಾವುದೇ ಹಂತದಲ್ಲೂ ಬೇಸರ ಬಾರದಂತೆ ಅವರ ಸಾಲುಗಳು ರಚನೆಯಾಗಿದೆ. 500 ಪುಟಗಳಿಗೂ ಅಧಿಕವಿರುವ ಕಾದಂಬರಿಯನ್ನು ಓದಿಸುವ ಶಕ್ತಿ ಇದ್ದದ್ದು ಭೈರಪ್ಪ ಅವರಿಗೆ ಮಾತ್ರ. ಅವರು ಯಾವುದೇ ಕಾದಂಬರಿಗಳನ್ನು ರಚಿಸುವುದಕ್ಕೂ ಮುನ್ನ ವಾಸ್ತವಕ್ಕೆ ಹತ್ತಿರವಾಗಿ ಘಟನೆಗಳನ್ನು ಅನುಭವಿಸಿ ಸಾಲುಗಳನ್ನು ರಚಿಸುತ್ತಿದ್ದರು. ಅವರು ಬರೆದಿರುವ ಬಹುತೇಕ ಪುಸ್ತಕಗಳು ಇತರ ಭಾಷೆಗೆ ಭಾಷಾಂತರವಾಗಿವೆ ಎಂದರು.

ರೋಟರಿ ರಾಯಲ್ ಅಧ್ಯಕ್ಷ ಹಾಗೂ ಅಕ್ಷರ ಬುಕ್ ಹೌಸ್ ಮಾಲೀಕ ಟೈಮ್ಸ್ ಬಿ.ಕೆ.ಗಂಗಾಧರ ಮಾತನಾಡಿ, ಡಾ.ಎಸ್.ಎಲ್. ಭೈರಪ್ಪ ಅವರು ನಮ್ಮ ಜಿಲ್ಲೆಯವರು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಯಿದೆ. ಇಡೀ ಕನ್ನಡ ನಾಡಿನ ಸಾಹಿತ್ಯ ಲೋಕಕ್ಕೆ ಆಧುನಿಕ ಕಾಲದ ಶಕ್ತಿದಾಯಕರಾದ ಅವರನ್ನು ಇಂದು ನಾವು ಕಳೆದುಕೊಂಡಿದ್ದೇವೆ ಎಂದರು.

ಡಾ.ಎಸ್.ಎಲ್.ಭೈರಪ್ಪ ಅವರನ್ನು ಕಳೆದ ಕೆಲವು ವರ್ಷಗಳ ಹಿಂದೆ ಇದೇ ಅಕ್ಷರ ಬುಕ್ ಹೌಸ್‌ಗೆ ಕರೆಸಲಾಗಿತ್ತು. ಆ ವೇಳೆ ಅವರು ತಮ್ಮ ಪುಸ್ತಕಗಳನ್ನು ನೋಡಿ ಸಂತಸಪಟ್ಟಿದ್ದರು. ಅದಷ್ಟು ಸಾಲದು ಎಂಬಂತೆ ಯಾವ ಪುಸ್ತಕವನ್ನು ಯಾವ ಕಾಲಘಟ್ಟದಲ್ಲಿ ಹಾಗೂ ಯಾವ ಸನ್ನಿವೇಶದಲ್ಲಿ ರಚನೆ ಮಾಡಿದ್ದೆ ಎಂದು ಹೇಳುವ ಮೂಲಕ ತಮ್ಮ ಜ್ಞಾಪಕ ಶಕ್ತಿಯನ್ನು ತೋರಿದ್ದರು. ಅವರ ಪ್ರತಿಯೊಂದು ಪುಸ್ತಕವೂ ಓದುಗನಿಗೆ ಸದಾ ಓದಬೇಕೆನ್ನಿಸುತ್ತದೆ. ಓದುಗರಲ್ಲಿ ಹೊಸ ಚೈತನ್ಯದ ಜತೆಗೆ ಓದುವ ಮನಸ್ಥಿತಿ ಬೆಳೆಸುತ್ತದೆ. ನಾಡಿನ ಯುವ ಸಮುದಾಯ ಭೈರಪ್ಪ ಅವರ ಪುಸ್ತಕಗಳನ್ನು ಓದಬೇಕು ಎಂದು ಹೇಳಿದರು.

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಚಿನ್ನೇನಹಳ್ಳಿ ಸ್ವಾಮಿ, ಕಾರ್ಯದರ್ಶಿ ರಘುನಂದನ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಖಜಾಂಚಿ ಎಚ್.ಕೆ.ದಿಲೀಪ್ ಕುಮಾರ್, ಸದಸ್ಯರಾದ ಸಚ್ಚಿನ್, ಎಸ್.ಯೋಗೇಶ್, ಡಾ. ಬಿ.ವಿಕ್ರಂ, ಆರ್.ಟಿ.ಪುನೀತ್, ಶ್ರೀನಂದ್, ಅಕ್ಷರ ಬುಕ್ ಹೌಸ್ ವ್ಯವಸ್ಥಾಪಕ ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net