

ಬೆಳಗಾವಿ: ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಮತಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಮತಬೇಟೆ ನಡೆಸಿದರು. ನಗರದ ಖಡಕ್ ಗಲ್ಲಿಯ ಶ್ರೀ ಮರಗಾಯಿ ಲಕ್ಷ್ಮೀ ದೇವಸ್ಥಾನದಲ್ಲಿ ಅದ್ದೂರಿ ಪೂಜೆ ಸಲ್ಲಿಸುವ ಮೂಲಕ ಮತಯಾಚನೆ ಆರಂಭಿಸಿದರು. ಖಡಕ್ ಗಲಿಯಲ್ಲಿ ಜನರು ಡಾ.ರವಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಬೆಳಗಾವಿ ಖಡಕ್ ಗಲ್ಲಿ, ಬಡಕಲ್ ಗಲ್ಲಿ, ಚವಾಟ್ ಗಲ್ಲಿಗಳು ಚುನಾವಣಾ ಫಲಿತಾಂಶದ ಮೇಲೆ ವ್ಯಾಪಕ ಪ್ರಭಾವ ಬೀರಲಿವೆ. ಹೀಗಾಗಿ ನೀವು ನನಗೆ ಬೆಂಬಲ ನೀಡುತ್ತಿರುವುದು ಅತೀವ ಸಂತಸ ತಂದಿದೆ ಎಂದು ರವಿ ಪಾಟೀಲ ಹೇಳಿದರು.
ಡಬಲ್ ಇಂಜಿನ್ ಸರ್ಕಾರ ಯಶಸ್ವಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಅದರಂತೆ ಬೆಳಗಾವಿ ನಗರದಲ್ಲಿ ಹೊಸ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಜನರು ನನಗೆ ಆಶೀರ್ವಾದ ಮಾಡಬೇಕು ಎಂದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಾದ್ಯಂತ ಬಿಜೆಪಿ ಅಭ್ಯರ್ಥಿ ಪ್ರಚಾರ ಕಾರ್ಯಕ್ಕೆ ಭಾರಿ ಸ್ಪಂದನೆ ದೊರೆತಿದ್ದು ಖಡಕ್ ಗಲ್ಲಿಯಲ್ಲಿ ನಡೆದ ಪ್ರಚಾರ ರ‌್ಯಾಲಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಹೊಸ ಆಯಾಮ ನೀಡಿದೆ. ಸಾಗರೋಪಾದಿಯಲ್ಲಿ ಮತದಾರರು ವಿಶೇಷವಾಗಿ ಮರಾಠ ಸಮುದಾಯದ ಜನರು ಡಾ. ರವಿ ಪಾಟೀಲ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸಿ, ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆಂದು ಶಾಸಕ ಅನಿಲ ಬೆನಕೆ ಹೇಳಿದರು.
ಗೋವಾ ಸಿಎಂ ಭಾಗಿ: ಗೋವಾ ಮುಖ್ಯಮಂತ್ರಿ ಪ್ರವೋದ ಸಾವಂತ ಅವರು ಭಾನುವಾರ ಸಾಂಪ್ರದಾಯಿಕ ಮರಾಠ ಪೇಟ ಧರಿಸಿ, ಡಾ. ರವಿ ಪಾಟೀಲ ಪರ ಮತಯಾಚನೆ ಮಾಡಿದರು. ಖಡಕ್ ಗಲ್ಲಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡರು. ಸ್ಥಳೀಯರು ಪಟಾಕಿ ಸಿಡಿಸಿ, ಹರ್ಷದಿಂದ ಸ್ವಾಗತಿಸಿದರು. ಡಾ. ರವಿ ಪಾಟೀಲ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಭಾವಿತರಾಗಿದ್ದಾರೆ. ನಗರದ ಮತದಾರರು ಭಾರತೀಯ ಜನತಾ ಪಾರ್ಟಿ ಪರ ವಿಶೇಷ ಒಲವು ಹೊಂದಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರು ಗೆಲುವಾಗಲಿದೆ ಎಂದರು. ಬಿಜೆಪಿ ಕಾರ್ಯಕರ್ತರು ಇದ್ದರು.