

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜಕುಮಾರ ಕೇವಲ ವ್ಯಕ್ತಿ, ನಟ ಅಲ್ಲ. ಅವರೊಬ್ಬ ಪರಿಪೂರ್ಣ ವ್ಯಕ್ತಿತ್ವದ ಆದರ್ಶ ಮನುಷ್ಯ. ಕನ್ನಡ ನಾಡು, ನುಡಿ, ಭಾಷೆೆ, ಭೂಮಿಯ ರಕ್ಷಣೆಗಾಗಿ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ವರನಟ ಡಾ. ರಾಜಕುಮಾರ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗೋಕಾಕ ಚಳವಳಿ ಸೇರಿ ಅನೇಕ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ನಟ ಸಾರ್ವಭೌಮ ರಾಜಕುಮಾರ ಅವರ ಭಾಷಾಭಿಮಾನ ನಮಗೆಲ್ಲ ಸೂರ್ತಿಯ ಚಿಲುಮೆಯಾಗಿದೆ. ಅಭಿನಯದ ಮೂಲಕ ನಾಡಿನ ಪ್ರತಿಯೊಬ್ಬರ ಹೃದಯದಲ್ಲಿ ಡಾ. ರಾಜಕುಮಾರ ಅಮರರಾಗಿದ್ದಾರೆ ಎಂದರು.
ಹಿರಿಯ ವಕೀಲ, ಕಲಾವಿದ ಸೋಮಶೇಖರ ಜಾಡರ ವಿಶೇಷ ಉಪನ್ಯಾಸ ನೀಡಿದರು.
ಜಿ.ಪಂ. ಸಿಇಒ ಭುವನೇಶ ಪಾಟೀಲ ಅವರು ಡಾ. ರಾಜಕುಮಾರ ಅವರ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಹಾಡುವ ಮೂಲಕ ಡಾ. ರಾಜ್ ಗೀತ ಗಾಯನಕ್ಕೆ ಚಾಲನೆ ನೀಡಿದರು. ಪ್ರೌಢಶಾಲಾ ಶಿಕ್ಷಕ ಬಾಬಾಜಾನ್ ಮುಲ್ಲಾ, ಬಿಆರ್‌ಪಿ ಜಯಲಕ್ಷ್ಮೀ ಎಚ್., ಯುವ ಗಾಯಕಿ ಅಕ್ಸಾ ಮುಲ್ಲಾ ಹಾಗೂ ಕಂದಾಯ ಇಲಾಖೆ ಅಽಕಾರಿ ಮಲ್ಲಿಕಾರ್ಜುನ ಸೊಲಗಿ ಡಾ. ರಾಜಕುಮಾರ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪಿ. ಶುಭಾ, ಜಗದೀಶ ಪಾಟೀಲ, ಡಾ. ಎಸ್.ಎಂ. ಹೊನಕೇರಿ, ಡಾ. ಎಚ್.ಎಚ್. ಕುಕನೂರ ಹಾಗೂ ವಿದ್ಯಾರ್ಥಿಗಳು, ಡಾ. ರಾಜ್ ಅಭಿಮಾನಿಗಳು, ಚಿತ್ರಾ ಫಿಲ್ಮ್ ಸೊಸೈಟಿಯ ಪದಾಕಾರಿಗಳು ಉಪಸ್ಥಿತರಿದ್ದರು.