

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಸಹ ರಾಜಕೀಯ ಕ್ಷೇತ್ರಕ್ಕೆ ಬರದೆ, ಕನ್ನಡ ಚಿತ್ರರಂಗಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ವರನಟ ಡಾ. ರಾಜ್ಕುಮಾರ್. ಅವರ ಸಾಧನೆ, ಮೇರುವ್ಯಕ್ತಿತ್ವ, ಕನ್ನಡಾಭಿಮಾನ, ಭಾಷಾಪ್ರೇಮ ಮಾದರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ಉಡುಪಿಯ ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಏ.24ರಂದು ಆಯೋಜಿಸಿದ್ದ ಕನ್ನಡದ ವರನಟ ಡಾ.ರಾಜ್ಕುಮಾರ್ ಅವರ 97ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ರಾಜ್ ಅವರು, 5 ದಶಕಗಳಲ್ಲಿ 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1942ರಲ್ಲಿ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿ ವೃತ್ತಿ ಆರಂಭಿಸಿದ್ದರು. ಅವರ ಎಲ್ಲ ಸಿನಿಮಾಗಳೂ ಸಹ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಗಾಯಕರೂ ಆಗಿದ್ದ ಅವರಿಗೆ ಭಾರತ ಸರ್ಕಾರ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಗೋಕಾಕ ಚಳವಳಿ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಲ್ಲೂ ಕೈಜೋಡಿಸುವ ಮೂಲಕ ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ ಎಂದರು.
ಕಾಲೇಜಿನ ವಿದ್ಯಾರ್ಥಿನಿಯರಾದ ದಿಯಾ, ದಿಶಾ ಹಾಗೂ ಶ್ರೀಪದಾ ನಾಡಗೀತೆ ಹಾಡಿದರು. ಪ್ರೊ. ಡಾ. ರಾಜೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನಾ ವಂದಿಸಿದರು.
ಆಡುಮುಟ್ಟದ ಸೊಪ್ಪಿಲ್ಲ, ಡಾ. ರಾಜ್ ನಿರ್ವಹಿಸದ ಪಾತ್ರಗಳಿಲ್ಲ ಎಂಬ ಮಾತಿದೆ. ನಟನೆ, ಗಾಯನ, ಚಿತ್ರನಿಮಾರ್ಣದಲ್ಲಿ ತೊಡಗಿ ಕನ್ನಡಚಿತ್ರರಂಗವನ್ನು ಉತ್ತುಂಗದ ಶಿಖರಕ್ಕೆ ಏರಿಸಿದ ಖ್ಯಾತಿ ಮೇರುನಟ ಡಾ. ರಾಜ್ಕುಮಾರ್ಗೆ ಸಲ್ಲುತ್ತದೆ. ಗೋಕಾಕ ಚಳವಳಿಯಲ್ಲೂ ಭಾಗವಹಿಸಿ ಜನಸಾಮಾನ್ಯರನ್ನು ಒಟ್ಟುಗೂಡಿಸಿ ಸಮುದಾಯದ ನಾಯಕರಾದರು. ವಿನಯವಂತ, ಸದ್ಗುಣಿಯೂ ಆಗಿದ್ದ ಅವರು 78ನೇ ವಯಸ್ಸಿನಲ್ಲಿ ನಿಧನರಾದರು. ಇಂದಿಗೂ ತಮ್ಮ ಮನೋಜ್ಞ ಅಭಿನಯದ ಮೂಲಕ ಕನ್ನಡ ನಾಡಿನಲ್ಲಿ ಜೀವಂತರಾಗಿದ್ದಾರೆ. | ಭವ್ಯಾ ನಾಗರಾಜ. ಉಪನ್ಯಾಸಕಿ