ಡಾ.ರಾಜ್ ಕುರಿತ ಚುಕ್ಕಿ ಚಿತ್ರ ಸಂಪುಟ ಬಿಡುಗಡೆ ಮೇ 21ರಂದು

HH Mayadar Raichur Web
Published on

ರಾಯಚೂರು: ನಗರದ ಕನ್ನಡ ಭವನದಲ್ಲಿ ಮೇ 21ರಂದು ಬೆಳಗ್ಗೆ 10.30ಕ್ಕೆ ನಟ ಡಾ.ರಾಜಕುಮಾರ ಕುರಿತ 108 ಚುಕ್ಕಿ ಚಿತ್ರಗಳ ಅಮೂಲ್ಯ ಮುತ್ತು ಸಂಪುಟ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾದಾರ್ ಲಲಿತ ಕಲಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಲಾವಿದ ಎಚ್.ಎಚ್.ಮ್ಯಾದಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಸತತ ನಾಲ್ಕು ವರ್ಷಗಳ ಪರಿಶ್ರಮದಿಂದ ಡಾ.ರಾಜಕುಮಾರ ಅವರ ಸಿನಿಮಾ ಮತ್ತು ಜೀವನ ಕುರಿತು 106 ಚುಕ್ಕಿ ಚಿತ್ರಗಳು ಹಾಗೂ ಎರಡು ರೇಖಾ ಚಿತ್ರಗಳನ್ನು ರಚಿಸಿ ಸಂಪುಟ ಹೊರತರಲಾಗಿದೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಿ.ಜಿ.ಅಂದಾನಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಿ.ಮಹೇಂದ್ರ ಸಂಪುಟ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿ ವೀರ ಹನುಮಾನ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಹಿರಿಯ ಕಲಾವಿದ ಪಿ.ಎ.ಬಿ.ಈಶ್ವರ ಸಂಪುಟ ಕುರಿತು ಮಾತನಾಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಚಿತ್ರ ಕಲಾವಿದ ವಿಶ್ವನಾಥ ಗುಗ್ಗರಿ, ಸುರಭಿ ಸಾಂಸ್ಕೃತಿಕ ಬಳಗದ ಜಿ.ಸುರೇಶ, ಸಾಹಿತಿ ಈರಣ್ಣ ಬೆಂಗಾಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕನ್ನಡ ಭವನದಲ್ಲಿ ಮೇ 21 ರಿಂದ 23ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಎಚ್.ಎಚ್.ಮ್ಯಾದಾರ ತಿಳಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಬಷೀರ್ ಅಹ್ಮದ್ ಹೊಸಮನಿ, ಈರಣ್ಣ ಬೆಂಗಾಲಿ, ಲೋಹಿತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net