

ಮಳವಳ್ಳಿ: ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಕೊಡುಗೆ ನೀಡಿರುವ ವರನಟ ಡಾ.ರಾಜ್‌ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಡಾ.ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಒತ್ತಾಯಿಸಿದರು.
ಪಟ್ಟಣದಲ್ಲಿರುವ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಡಾ.ರಾಜ್ ಅವರ ಹಲವು ಚಲನಚಿತ್ರಗಳನ್ನು ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸುವ ಮೂಲಕ ಭವಿಷ್ಯದ ಮಕ್ಕಳಲ್ಲಿ ನಾಡು ನುಡಿಯ ಕಾಳಜಿಯನ್ನು ಬೆಳೆಸುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದರು.
ಮೇರು ವ್ಯಕ್ತಿತ್ವದ ಡಾ.ರಾಜ್‌ಕುಮಾರ್ ಅವರು ತಮ್ಮ ನಟನೆಯ ಮೂಲಕ ನಾಡಿಗೆ ಆದರ್ಶವಾಗಿದ್ದರು. ಅವರು ಚಲನಚಿತ್ರದ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದ್ದಾರೆ. ಎಲ್ಲ ರೀತಿಯ ಕಥೆಗಳಿಗೂ ಜೀವ ತುಂಬುವ ಮೂಲಕ ಕನ್ನಡಿಗರ ಶಕ್ತಿಯಾಗಿದ್ದರು. ಇದಕ್ಕೆ ಅಮೆರಿಕಾದಲ್ಲಿ ಅವರಿಗೆ ಸಂದಿರುವ ಪ್ರಶಸ್ತಿ ಸಾಕ್ಷಿ. ಬಡವರ ಪರ, ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಅವರಲ್ಲಿರುವ ಕಾಳಜಿ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಎಂ.ಎನ್.ಶಿವಸ್ವಾಮಿ, ರಾ.ಶಿ.ರಾ.ಪು ಸಂಘದ ಅಧ್ಯಕ್ಷ ಕೃಷ್ಣ, ಮಹೇಶ್, ಸೋಮಶೇಖರ್, ಜಗದೀಶ್(ಜಗ್ಗು), ಸುನೀಲ್, ನಾಗರಾಜು, ಶಿವಕುಮಾರ್, ಮಹದೇವು, ಜಗದೀಶ್ ಇದ್ದರು.