ಜನಮಾನಸದಲ್ಲಿ ಡಾ.ರಾಜ್ ಶಾಶ್ವತ: ಜಿಲ್ಲಾಧಿಕಾರಿ ಡಾ.ಕುಮಾರ ಅಭಿಮತ

Dr.Rajkumar Birthday Celebration Mandya
Published on

ಮಂಡ್ಯ: ನಟಸಾರ್ವಭೌಮ ಡಾ.ರಾಜ್‌ಕುಮಾರ್ ಕುರಿತು ಕನ್ನಡಿಗರಿಗೆ ಹೇಳುವ ಅಗತ್ಯವಿಲ್ಲ. ಅವರ ಸರಳತೆ, ಸಜ್ಜನಿಕೆ ವ್ಯಕ್ತಿತ್ವ ಹಾಗೂ ಕೊಡುಗೆ ಕನ್ನಡಿಗರ ಜನಮಾನಸದಲ್ಲಿ ಸದಾಕಾಲ ಚಿರವಾಗಿದೆ. ಕನ್ನಡ ಚಿತ್ರರಂಗ ಹಾಗೂ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟವರು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವರನಟ ಡಾ.ರಾಜ್‌ಕುಮಾರ್ ಅವರ 97ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕವಾಗಿ ಡಾ.ರಾಜ್‌ಕುಮಾರ್ ಅವರು ನಮ್ಮನ್ನು ಆಗಲಿದ್ದಾರೆ. ಆದರೆ ಅವರ ಕೊಡುಗೆ, ಆದರ್ಶ, ಮೌಲ್ಯ, ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ಕನ್ನಡದ ಮೇಲೆ ಇದ್ದಂತ ಅಭಿಮಾನ ನಾವ್ಯಾರೂ ಮರೆಯುವಂತಿಲ್ಲ. ಬಲು ಕಠಿಣದ ಪರಿಸ್ಥಿತಿಯಿಂದ ಬಂದು ಸಾಧನೆ ಮಾಡಿದವರು. ಪ್ರತಿಭೆ ಇದ್ದವರು ಯಾವ ಮಟ್ಟದಲ್ಲಿ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ನಿದರ್ಶನ. ಅವರು ನಟಿಸಿದ ಎಲ್ಲ ಚಲನಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಮನೋರಂಜನೆಯ ಜತೆ ಮಾನವೀಯ ಮೌಲ್ಯವನ್ನು ತಮ್ಮ ಸಿನಿಮಾದಲ್ಲಿ ಅಳವಡಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಡಾ.ರಾಜ್ ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ಹೊಂದಿದ್ದರು. ಅಂತಹ ಮಹನೀಯರ ಆದರ್ಶಗಳನ್ನು ಮೌಲ್ಯಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನ ಪ್ರಾಂಶುಪಾಲ ಡಾ.ಗುರುರಾಜ್‌ಪ್ರಭು ಮಾತನಾಡಿ, ಕನ್ನಡ ನಾಡು ನುಡಿ ಮತ್ತು ಕನ್ನಡ ಚಲನಚಿತ್ರರಂಗದ ಇತಿಹಾಸವನ್ನು ನೋಡಿದರೆ ಡಾ.ರಾಜ್‌ಕುಮಾರ್ ಉತ್ತುಂಗದಲ್ಲಿ ಕಾಣುತ್ತಾರೆ. ಜಗತ್ತಿನ ಹಲವು ದೇಶದಲ್ಲಿ ಡಾ.ರಾಜ್‌ಕುಮಾರ್ ಅವರ ಅಭಿಮಾನಿಗಳು ಸಂಘಗಳನ್ನು ಕಟ್ಟಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಡಾ.ರಾಜ್ ಕೇವಲ ನಟನಾಗಿ ಅಲ್ಲದ ತಮ್ಮ ಸರಳ ವ್ಯಕ್ತಿತ್ವದಿಂದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ತಮ್ಮ ನಟನೆಯ ಮೂಲಕ ನಮ್ಮ ಸಮಾಜ ಮತ್ತು ಸಂಸ್ಕೃತಿಯ ಪ್ರತಿಬಿಂಬಿಸುವ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರರಂಗಕ್ಕೆ ಮಾದರಿಯಾಗಿ ನಿಲ್ಲುತ್ತಾರೆ ಎಂದು ಹೇಳಿದರು.

ಇತಿಹಾಸ ಪ್ರಾಧ್ಯಾಪಕ ಕಾಂತರಾಜು ಮಾತನಾಡಿ, ಡಾ.ರಾಜ್ ಯಶಸ್ಸಿನ ಉತ್ತುಂಗದಲ್ಲಿದ್ದರೂ ಸಹ ಸರಳತೆಯ ಸಾರ್ವಭೌಮರಾಗಿದ್ದರು. ಅವರು ಅಭಿನಯಸದೇ ಇರುವ ಯಾವುದೇ ಪಾತ್ರಗಳಿಲ್ಲ. ಎಲ್ಲ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಿ ಮೆರಗು ತುಂಬುತ್ತಿದ್ದರು. ಮಯೂರ, ಇಮ್ಮಡಿ ಪುಲಕೇಶಿ, ಶ್ರೀಕೃಷ್ಣದೇವರಾಯ ಅಂತಹ ಪೌರಾಣಿಕ ಪಾತ್ರಗಳನ್ನು ಬಣ್ಣ ಹಚ್ಚಿ ಜೀವ ತುಂಬಿದವರು. ಕನ್ನಡ ನಾಡು ನುಡಿ ವಿಚಾರದಲ್ಲಿ ಡಾ.ರಾಜ್ ಅವರ ಗಟ್ಟಿತನದ ನಿಲುವು ಗೋಕಾಕ್ ಚಳವಳಿಗೆ ಶಕ್ತಿಯನ್ನು ತುಂಬಿತ್ತು. ಆ ಹೋರಾಟದಲ್ಲಿ ಲಕ್ಷಾಂತರ ಜನರು ಸೇರಿಸಿ ಯಶಸ್ವಿಗೊಳಿಸಿದರು ಎಂದು ಹೇಳಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಸಂದೇಶ್, ಅರಿವು ಬೋಧಿ ಫೌಂಡೇಷನ್ ಅಧ್ಯಕ್ಷ ಗಣೇಶ್ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ರಾಷ್ಟ್ರೀಯ ಯುವ ಪ್ರಶಸ್ತಿ ಬಿ.ಎಸ್.ಅನುಪಮಾ, ಮಹಿಳಾ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಶಿವರಾಜ್, ಸಾಂಸ್ಕೃತಿಕ ಕಾರ್ಯದರ್ಶಿ ನಿಂಗರಾಜು, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರವೀಂದ್ರ, ನಗರಸಭೆ ಮಾಜಿ ಸದಸ್ಯ ಆನಂದ್ ಇತರರಿದ್ದರು. ಇದೇ ವೇಳೆ ನಿಶ್ಚಯ್‌ಜೈನ್, ಮನ್ಸೂರ್ ಪಾಷಾ ಹಾಗೂ ಕೃಷ್ಣೇಗೌಡ ಹಲವು ಗೀತೆಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net