ರೈಲ್ವೆ ಆಸ್ಪತ್ರೆಗೆ ಡಾ. ಮಾನ್​ಸಿಂಗ್ ಭೇಟಿ

New Railway Hospital New
Published on

ಹುಬ್ಬಳ್ಳಿ : ರೈಲ್ವೆ ಮಂಡಳಿಯ ರೈಲ್ವೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಮಾನ್​ಸಿಂಗ್ ಅವರು ಮಂಡಳಿಯ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಂ. ರವೀಂದ್ರನ್ ಅವರೊಂದಿಗೆ ಇಲ್ಲಿನ ನೈಋತ್ಯ ರೈಲ್ವೆಯ ಕೇಂದ್ರ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ, ಸಮಗ್ರ ತಪಾಸಣೆ ನಡೆಸಿದರು.

ತಪಾಸಣೆಯ ಸಮಯದಲ್ಲಿ, ಡಾ.ಮಾನ್ ಸಿಂಗ್ ಅವರು ಡಯಾಲಿಸಿಸ್ ಘಟಕ, ಹೊರರೋಗಿ ವಿಭಾಗಗಳು (ಒಪಿಡಿ), ಆಪರೇಷನ್ ಥಿಯೇಟರ್ (ಒಟಿ), ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಮಳಿಗೆಗಳು ಮತ್ತು ರೋಗಿಗಳ ವಾರ್ಡ್​ಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಪರಿಶೀಲಿಸಿದರು. ಹೊಸದಾಗಿ ನವೀಕರಿಸಿದ ಶಸ್ತ್ರಚಿಕಿತ್ಸಾ ಬಂಡಾರ ಮತ್ತು ಕ್ರಿಮಿನಾಶಕ ಮಶೀನ್ ಅನ್ನು ಅವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

ವೈದ್ಯಕೀಯ ಸೇವೆಗಳಲ್ಲಿ ಹೆಚ್ಚಿನ ಸುಧಾರಣೆಗೆ ಸಲಹೆಗಳನ್ನು ನೀಡಿದ ಡಾ. ಮಾನ್​ಸಿಂಗ್ ಅವರು, ಕೇಂದ್ರೀಯ ಆಸ್ಪತ್ರೆ ಮತ್ತು ನೈಋತ್ಯ ರೈಲ್ವೆಯ ವೈದ್ಯಕೀಯ ವಿಭಾಗದ ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಾನ್​ಸಿಂಗ್, ರೋಗಿಗಳ ಆರೈಕೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಪರಿಶ್ರಮ ಮತ್ತು ಬದ್ಧತೆಯನ್ನು ಶ್ಲಾಘಿಸಿದರು.

ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್.ರಾಮಚಂದ್ರ, ಹುಬ್ಬಳ್ಳಿಯ ಕೇಂದ್ರೀಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಬಿ.ಟಿ. ಕೃಷ್ಣಾರೆಡ್ಡಿ, ಹುಬ್ಬಳ್ಳಿ ವಿಭಾಗದ ಮುಖ್ಯ ವೈದ್ಯಕೀಯ ಅಧೀಕ್ಷಕಿ ಡಾ. ಸಹನಾ ನಾಯಕ್ ಹಾಗೂ ಕೇಂದ್ರ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net