

ಹುಬ್ಬಳ್ಳಿ: ಶಿಕ್ಷಣ ಪ್ರೇಮಿ, ಖ್ಯಾತ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ ಅವರ ಜನ್ಮದಿನ ನಿಮಿತ್ತ ಹಳೇಹುಬ್ಬಳ್ಳಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂಬರ್ 19ಕ್ಕೆ ವಿವಿಧ ಸಲಕರಣೆಗಳನ್ನು ದೇಣಿಗೆಯಾಗಿ ನೀಡಲಾಯಿತು.
ಶಾಲೆಯ ಕುಂದುಕೊರತೆಗಳನ್ನು ಆಲಿಸಿದ ಡಾ. ಪ್ರಸಾದ ಅವರು, ನೀರಿನ ಫಿಲ್ಟರ್, ನಾಲ್ಕು ಸಿಸಿ ಕ್ಯಾಮೆರಾ, ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್, 10 ವೈಟ್ ಬೋರ್ಡ್ ಕೊಡುಗೆ ನೀಡಿದರು. ಇದೇ ಸಂದರ್ಭದಲ್ಲಿ ಆರ್ ಒ ಪ್ಲಾಂಟ್ ಉದ್ಘಾಟನೆ ಮಾಡಲಾಯಿತು.
ಮುಖ್ಯೋಪಾಧ್ಯಾಯ ಹನಮಂತಪ್ಪ ಕುಂದರಗಿ, ಶಿಕ್ಷಕರು ಹಾಗೂ ಸಿಬ್ಬಂದಿಯವರು ಸೇರಿ ಡಾ. ವಿ.ಎಸ್.ವಿ. ಪ್ರಸಾದ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರಸಾದ್ ಅವರು, ಉತ್ತಮ ಗುಣಮಟ್ಟದ ಸ್ಮಾರ್ಟ ಕ್ಲಾಸ್ ಶಿಕ್ಷಣ ಒದಗಿಸಲು ಕಂಪ್ಯೂಟರ್ ಮತ್ತು ಪೀಠೋಪಕರಣಗಳನ್ನು ನೀಡಲಾಗಿದೆ. ಇವೆಲ್ಲವುಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ಪಡೆಯಲಿ ಎಂದು ಹಾರೈಸಿದರು.
ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಅವರು, ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿರುವ ಡಾ. ಬಿ.ಆರ್. ಅಂಬೇಡ್ಕರ್, ಎಪಿಜೆ ಅಬ್ದುಲ್ ಕಲಾಂ ಅವರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಅವರನ್ನು ನೋಡಿದರೆ ಅದ್ಬುತ ಕನಸುಗಳು ಹುಟ್ಟಿಕೊಳ್ಳಬೇಕು. ಅಂತಹ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಉತ್ಸುಕತೆ ಹೆಚ್ಚಾಗಬೇಕು. ಸರ್ಕಾರಿ ಶಾಲೆಯ ಮಕ್ಕಳು ಇತಿಹಾಸವನ್ನು ಸೃಷ್ಟಿಸುವ ಮತ್ತು ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಶಕ್ತಿ ಹೊಂದಿದ್ದಾರೆ ಎಂದರು.
ರೈಲ್ವೆ ಗುತ್ತಿಗೆದಾರ ವೆಂಕಟೇಶ ಎಚ್, ಮಾಜಿ ಸಿಂಡಿಕೆಟ್ ಸದಸ್ಯ ಸುಭಾಸಸಿಂಗ್ ಜಮಾದಾರ, ಬಿಜೆಪಿ ಹು-ಧಾ ಪೂರ್ವ ಕ್ಷೇತ್ರದ ವಕ್ತಾರ ಲಕ್ಷ್ಮೀಕಾಂತ ಘೋಡಕೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕಾಟಕರ, ತೋಟಪ್ಪ ನೀಡಿಗುಂದಿ, ಸಮತಾ ಸೇನಾ ಅಧ್ಯಕ್ಷ ಗುರುನಾಥ್ ಉಳ್ಳಿಕಾಶಿ, ರವಿ ಬಂಕಾಪುರ್, ಮಂಜುನಾಥ ವದ್ದಿ, ರವಿ ಯಾವಗಲ್, ನಾರಾಯಣ ಪಾಂಡುರಂಗ ಉಪಸ್ಥಿತರಿದ್ದರು.