ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಪ್ರಭಾಕರ ಶಿಶಿಲ ಆಯ್ಕೆ

Shishila
Published on


ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಫೆ.21 ಮತ್ತು 22ರಂದು ನಡೆಯಲಿರುವ 27ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.
ಸುಳ್ಯ ತಾಲೂಕಿನ ಕೂತುಕುಂಜ ಕಜೆ ಎಂಬಲ್ಲಿ ಹುಟ್ಟಿ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಬೆಳೆದು, ಪ್ರಸ್ತುತ ಸುಳ್ಯದ ನಿವಾಸಿಯಾಗಿರುವ ಡಾ. ಪ್ರಭಾಕರ ಶಿಶಿಲರು ಕನ್ನಡದ ವಿಶಿಷ್ಟ ಪ್ರತಿಭೆ ಹಾಗೂ ಶ್ರೇಷ್ಠ ಸಾಹಿತಿ. ಕನ್ನಡದಲ್ಲಿ 10 ಕಾದಂಬರಿ, 8 ಕಥಾ ಸಂಕಲನ 5 ಪ್ರವಾಸ ಕಥನ ಸಹಿತ ಒಟ್ಟು 54 ಸೃಜನಶೀಲ ಕೃತಿಗಳನ್ನು ಹಾಗೂ 165 ಅರ್ಥಶಾಸ್ತ್ರ ವಿಚಾರ ಸಾಹಿತ್ಯ ಕೃತಿಗಳನ್ನು ಹಾಗೂ ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ದಿನ ಪತ್ರಿಕೆಗಳು ಹಾಗೂ ನಿಯತಾಕಾಲಿಕಗಳಲ್ಲಿ 250ಕ್ಕೂ ಮಿಕ್ಕಿ ಲೇಖನ, ಕತೆ, ವಿಡಂಬನೆ ಪ್ರಕಟಿಸಿರುತ್ತಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಶತಮಾನದ ಕವಿಗಳು ಕೃತಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಕವಿತೆಗಳು ಮಂಗಳೂರು ಆಕಾಶವಾಣಿಯಿಂದ ಪ್ರಸಾರವಾಗಿದೆ. ಅನೇಕ ಲಾವಣಿ ಮತ್ತು ಗೀಗೀ ಪದ ರಚಿಸಿದ್ದಾರೆ. ಇವರು ಬರೆದ ಪುಂಸ್ತ್ರೀ ಕೃತಿ ಸಂಸ್ಕೃತ , ಹಿಂದಿ, ಮಲೆಯಾಳಂ, ತೆಲುಗು, ತಮಿಳು, ತುಳು, ಕೊಂಕಣಿ, ಮರಾಠಿ, ಅರೆಭಾಷೆ, ಕೊಡವ, ಗುಜರಾಥಿ, ಬೆಂಗಾಲಿ, ಪಂಜಾಬಿ, ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡು ಜನಮನ್ನಣೆ ಪಡೆದಿದೆ. ಮತ್ಸೃಗಂಧಿ, ಕಪಿಲಳ್ಳಿಯ ಕತೆಗಳು, ಮೂಡಣದ ಕೆಂಪುಕಿರಣ,ಇರುವುದೆಲ್ಲವ ಬಿಟ್ಟು ಕೃತಿಗಳೂ ಅನ್ಯ ಭಾಷೆಗೆ ಅನುವಾದಗೊಂಡಿವೆ. ಯಕ್ಷಗಾನ ಹಾಗೂ ರಂಗಭೂಮಿಗೂ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net