

ಬೆಳಗಾವಿ: ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಪದ್ಮಶ್ರೀ ಪುರಸ್ಕೃತ, ಬ್ಯಾಡ್ಮಿಂಟನ್ ತಾರೆ ಪ್ರಕಾಶ ಪಡುಕೋಣೆ ದಂಪತಿಯನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಬರಮಾಡಿಕೊಂಡರು.
ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿವಿಧ ಚಿಕಿತ್ಸಾ ವಿಭಾಗಗಳಿಗೆ, ಅತ್ಯಾಧುನಿಕ ಪ್ರಯೋಗಾಲಯ, ಫರ್ಟಿಲಿಟಿ ಕೇಂದ್ರ, ಚಾರಿಟಬಲ್ ವಾರ್ಡ್, ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.
ಬಳಿಕ ಪ್ರಕಾಶ ಪಡುಕೋಣೆ ಮಾತನಾಡಿ, ಬೆಳಗಾವಿ ಮಹಾನಗರದಲ್ಲಿ ಇಂತಹ ಹೈಟೆಕ್ ಸೌಲಭ್ಯ ಒಳಗೊಂಡಿರುವ, ಒಂದೇ ಸೂರಿನಡಿ ಎಲ್ಲ ಚಿಕಿತ್ಸಾ ಸೌಲಭ್ಯ ಕಲ್ಪಿಸಿರುವ, ಕಾಗದ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಕಾರ್ಯ ಶ್ಲಾಘನೀಯ. ಅದರಲ್ಲಿಯೂ ಮುಖ್ಯವಾಗಿ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಅತ್ಯದ್ಭುತವಾಗಿದೆ. ಅತ್ಯಾಧುನಿಕವಾದ ವೈದ್ಯಕೀಯ ಸಾಮಗ್ರಿ, ಕಡಿಮೆ ವೆಚ್ಚದಲ್ಲಿ ಬೋನ್ ಮ್ಯಾರೋದಂತ ಶಸ್ತ್ರಚಿಕಿತ್ಸೆ ಹಾಗೂ ಪ್ರಕ್ರಿಯೆ ನಡೆಸುತ್ತ ಈ ಭಾಗದ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಆಶಾಕಿರಣವಾಗಿರುವುದು ಅತ್ಯಂತ ಶ್ಲಾಘನೀಯ ಎಂದರು.
ಆಸ್ಪತ್ರೆಯಲ್ಲಿ ಮಕ್ಕಳು ಮತ್ತು ತಾಯಿಯ ಆರೋಗ್ಯ ಕಾಳಜಿಗಾಗಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುವ ವಿಭಾಗ, ಉಚಿತ ಹಾಗೂ ವಿಶೇಷ ವಾರ್ಡ್‌ಗಳಿಗೆ ಭೇಟಿ ನೀಡಿದರು. ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡುತ್ತಿರುವುದು ಪ್ರಶಂಸನೀಯ. ಸುಮಾರು 1,400 ಹಾಸಿಗೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಡಾ.ಕೋರೆ ಅವರಿಗೆ ಜನತೆ ಮೇಲಿರುವ ಕಾಳಜಿಯಿಂದ. ಅದರಲ್ಲಿಯೂ ಮುಖ್ಯವಾಗಿ ಪ್ರತಿಯೊಂದು ಕಾಯಿಲೆಗೆ ಇಲ್ಲಿಯೇ ಚಿಕಿತ್ಸೆ ದೊರೆಯುವಂತೆ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಉಜ್ಜಲಾ ಪ್ರಕಾಶ ಪಡುಕೋಣೆ, ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ಮುಖ್ಯ ಸಂಯೋಜನಾಧಿಕಾರಿ ಡಾ.ಪ್ರೀತಿ ದೊಡವಾಡ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ, ಡಾ. ಸಂತೋಷ ಪಾಟೀಲ ಇತರರಿದ್ದರು.