ಕೆಎಲ್‌ಇಗೆ ಎನ್‌ಎಬಿಎಚ್ ಗುಣಮಟ್ಟದ ಮಾನ್ಯತೆ

21BGV_Jaggu 4
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ನಗರದ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಪ್ರತಿಷ್ಠಿತ ರಾಷ್ಟ್ರೀಯ ಆಸ್ಪತ್ರೆಯ ಮಾನ್ಯತಾ ಮಂಡಳಿ (ಎನ್‌ಎಬಿಎಚ್)ಯಿಂದ ಸಂಪೂರ್ಣ ಗುಣಮಟ್ಟದ ಮಾನ್ಯತೆ ಪಡೆದುಕೊಂಡಿದೆ.

ಎನ್‌ಎಬಿಎಚ್ ಭಾರತದಲ್ಲಿನ ಆರೋಗ್ಯ ಸೌಲಭ್ಯಗಳ ಗುಣಮಟ್ಟಕ್ಕೆ ಮಾನ್ಯತೆ ನೀಡುವ ಅಥವಾ ನಿರ್ಧರಿಸುವ ಸಂಸ್ಥೆಯಾಗಿದೆ. ಅತೀ ಹೆಚ್ಚು ಹಾಸಿಗೆಯುಳ್ಳ ಆಸ್ಪತ್ರೆಗಳಲ್ಲಿ ಎನ್‌ಎಬಿಎಚ್ ಮಾನ್ಯತೆ ಪಡೆದ ಪ್ರಥಮ ಆಸ್ಪತ್ರೆ ಇದಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮಾನ್ಯತೆ ಪಡೆದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾನ್ಯತೆ ಪ್ರಕ್ರಿಯೆಯು ರೋಗಿಯ ಸುರಕ್ಷತೆ, ಸೋಂಕು ನಿಯಂತ್ರಣ, ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಗಳ ಸಾಮರ್ಥ್ಯ ಸೇರಿ ವಿವಿಧ ಅಂಶಗಳನ್ನು ಪರಿಶೀಲಿಸುವ ಸಮಗ್ರ ಮೌಲ್ಯಮಾಪನ ಪ್ರಕ್ರಿಯೆ ಒಳಗೊಂಡಿತ್ತು. ಎನ್‌ಎಬಿಎಚ್ ಸಂಸ್ಥೆಯ ತಂಡವು ಆಸ್ಪತ್ರೆಯ ಎಲ್ಲ ವಿಭಾಗ ಪರಿಶೀಲಿಸಿದ ನಂತರ ನಡೆಸಿದ ಸಮಗ್ರ ಮೌಲ್ಯಮಾಪನ ಶ್ಲಾಘಿಸಿ ಸಂಪೂರ್ಣ ಎನ್‌ಎಬಿಎಚ್ ಮಾನ್ಯತೆ ನೀಡಿದೆ.

ನಮ್ಮ ಆಸ್ಪತ್ರೆಯು ಪೂರ್ಣ ಪ್ರಮಾಣದ ಎನ್‌ಎಬಿಎಚ್ ಮಾನ್ಯತೆ ಪಡೆದಿರುವುದಕ್ಕೆ ಹೆಮ್ಮೆಯಾಗಿದೆ. ಈಗ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಸಾಮಾನ್ಯ ಜನರಿಗೆ ಅತ್ಯಾಧುನಿಕ ಹಾಗೂ ಅತ್ಯುತ್ತಮ ಗುಣಮಟ್ಟದ ರೋಗಿಗಳ ಆರೈಕೆ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. 120ಕ್ಕೂ ಅಧಿಕ ನೀತಿ ನಿರೂಪಣೆಗಳನ್ನು ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ಎಂ.ದಯಾನಂದ ಹೇಳಿದ್ದಾರೆ.

ಎನ್‌ಎಬಿಎಚ್ ಎಂದರೇನು?: ಎನ್‌ಎಬಿಎಚ್ ಎಂದರೆ ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಆಫ್ ಹಾಸ್ಪಿಟಲ್ಸ್ ಮತ್ತು ಹೆಲ್ತ್ ಕೇರ್ ಪ್ರೊವೈಡರ್ಸ್ 2005ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು ಆಸ್ಪತ್ರೆ ಮತ್ತು ಆರೋಗ್ಯ ರಕ್ಷಣೆ ಒದಗಿಸುವವರಿಗೆ ರಾಷ್ಟ್ರೀಯ ಮಾನ್ಯತೆ ನೀಡುವ ಮಂಡಳಿ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಂಸ್ಥೆ ಅಥವಾ ಆಸ್ಪತ್ರೆ, ಅವುಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸುವ ಆಡಳಿತ ಮಂಡಳಿಯಾಗಿದೆ. ಎನ್‌ಎಬಿಎಚ್ ಭಾರತದ ಸಂವಿಧಾನದ ಪ್ರಕಾರ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದಡಿಯಲ್ಲಿ ಸಂವಿಧಾನಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. ಎನ್‌ಎಬಿಎಚ್ ದೇಶದ ಉನ್ನತ ಮಟ್ಟದಲ್ಲಿ ಆರೋಗ್ಯ ಮತ್ತು ಆರೋಗ್ಯ ಸೇವೆಗಳ ಮೇಲ್ವಿಚಾರಣೆ ಮಾಡುವ ಸಂಸ್ಥೆಯಾಗಿದೆ. ಇದರ ಮಾನ್ಯತೆ ಪಡೆಯುವಲ್ಲಿ ವೈದ್ಯರು, ನರ್ಸಿಂಗ್, ಪ್ಯಾರಾಮೆಡಿಕಲ್, ಕ್ಲರಿಕಲ್ ಸೇರಿ ಎಲ್ಲ ಸಿಬ್ಬಂದಿ ತಂಡವು ನಿರಂತರವಾಗಿ ಕಾರ್ಯ ನಿರತವಾಗಿತ್ತು. ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿರುವ ಆಸ್ಪತ್ರೆಯ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ದಯಾನಂದ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net