

ವಿಜಯವಾಣಿ ಸುದ್ದಿಜಾಲ ಮಾಂಜರಿ
ಇಂದಿನ ಯುವಕರು ದಿನಾಲು ವ್ಯಾಯಾಮ, ಸಂತುಲಿತ ಆಹಾರ ಸೇವನೆ ಮಾಡಿ ತಮ್ಮ ಶರೀರ ಸಂಪತ್ತನ್ನು ಗಳಿಸಿ ಇಂಥ ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಕುಸ್ತಿ ಕಲೆ ಪ್ರದರ್ಶಿಸಬೇಕು. ಅದಕ್ಕಾಗಿ ಈ ವರ್ಷದಿಂದ ನಮ್ಮ ಭಾಗದ ಒಬ್ಬ ಕುಸ್ತಿ ಪಟ್ಟು ದತ್ತಕ ಪಡೆದುಕೊಂಡು ನನ್ನ ಹುಟ್ಟೂರಾದ ಅಂಕಲಿಯಲ್ಲಿ ಒಂದು ಗರಡಿಮನೆ ನಿರ್ಮಿಸುವ ಗುರಿ ಇದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು
ತಮ್ಮ 78ನೇ ಜನ್ಮದಿನದ ಅಂಗವಾಗಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಶಾರದಾದೇವಿ ಕೋರೆ ಪ್ರೌಢ ಶಾಲೆ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದೆ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳಾ ನಿಕಾಲಿ ಜಂಗೀ ಕುಸ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮನ ಸೆಳೆದ ಪೈಲ್ವಾನರು: ಪ್ರಥಮ ಕುಸ್ತಿಯಲ್ಲಿ ಕೇಸರಿ ಹಾಗೂ ಕೊಲ್ಲಾಪುರದ ಗಂಗಾವಸ್ ಗರಡಿಮನೆ ಪೈಲ್ವಾನರಾದ ಸಿಕಂದರ ಶೇಕ ಮತ್ತು ವಾಯುಸೇನೆಯ ಸೈನಿಕ ಹಾಗೂ ಹರಿಯಾಣ ಕೇಸರಿ ಸತ್ಯೇಂದ್ರ ಮುಖರಿಯಾ ನಡುವೆ ನಡೆದ ಕುಸ್ತಿ ಅರ್ಧ ಗಂಟೆಗೂ ಅಧಿಕ ಕಾಲ ನಡೆದು ಸಮಬಲಗೊಂಡಿತು.
ಮಹಾರಾಷ್ಟ್ರ ಕೇಸರಿ ಪೈಲ್ವಾನ್ ಪೃಥ್ವಿರಾಜ್ ಹಾಗೂ ಹರಿಯಾಣ ಭಾರತ ಕೇಸರಿ ಪೈಲ್ವಾನ್ ಉಮೇಶ ಮಧುರ ನಡುವೆ ಎರಡನೇ ಕುಸ್ತಿ ನಡೆಯಿತು. ಇದರಲ್ಲಿ ಉಮೇಶ ಮಧುರ ಜಯಗಳಿಸಿದರು. ಮೂರನೆಯ ಕ್ರಮಾಂಕದ ಕುಸ್ತಿಯನ್ನು ಉತ್ತರಪ್ರದೇಶ ಕೇಸರಿ ಹಾಗೂ ಏಶಿಯನ್ ಬಂಗಾರ ಪದಕ ಪ್ರಾಪ್ತ ಜಂಟಿ ಭಾಟಿ ಹಾಗೂ ಮಹಾರಾಷ್ಟ್ರ ಕೇಸರಿ ದಾದಾ ಸೇಳೆಕೆ ಇವರ ನಡುವೆ ನಡೆಯಿತು. ಈ ಪಂದ್ಯ ಕೂಡ ರೋಮಾಂಚನಗೊಳಿಸಿ ಟೈ ಆಯಿತು. ನಾಲ್ಕನೆಯ ಕ್ರಮಾಂಕದ ಕುಸ್ತಿ ಉಪ ಮಹಾರಾಷ್ಟ್ರ ಕೇಸರಿ ಕೊಲ್ಲಾಪುರದ ಪೈಲ್ವಾನ್ ಪ್ರಕಾಶ ಬಣಕಾರ ಹಾಗೂ ಹರಿಯಾಣದ ಸಿಂದಕೇಸರಿ ರಜತ್ ರಾಹುಲ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಹರಿಯಾಣದ ಸಿಂದಕೇಸರಿ ರಜತ್ ರಾಹುಲ್ ಗೆಲವು ಸಾಧಿಸಿದರು.
ಮಹಿಳೆಯರ ರೋಮಾಂಚಕ ಕುಸ್ತಿ: ಹಿರಿಯ ರಾಷ್ಟ್ರೀಯ ಬಂಗಾರ ಪದಕ ವಿಜೇತರಾದ ಪ್ರಿಯಾಂಕ ಚಹಾಲ್ ಹಾಗೂ ಪುಣೆಯ ರಾಷ್ಟ್ರೀಯ ಪದಕ ವಿಜೇತ ಸೋನಾಲಿ ಮಾಡಲಿ ನಡುವೆ ನಡೆಯಿತು. ಸುಮಾರು ಅರ್ಧ ಗಂಟೆ ಕಾಲ ನಡೆದು ಟೈ ಆಯಿತು. ಎರಡನೇ ಕ್ರಮಾಂಕದ ಕುಸ್ತಿಯನ್ನು ಹರಿಯಾಣದ ರಾಷ್ಟ್ರೀಯ ಕುಸ್ತಿಪಟು ಚಂಚಲ ದಲಾಲ ಮಹಾರಾಷ್ಟ್ರದ ಯುವ ಗರ್ಜನ ಕೇಸರಿ ಕುಸ್ತಿಪಟು ಅಕ್ಷತಾ ಪಾಟೀಲ್ ನಡುವೆ ನಡೆದು ಅಕ್ಷತಾ ಪಾಟೀಲ್ ಜಯ ಸಾಧಿಸಿದರು. ಮೂರನೆಯ ಕ್ರಮಾಂಕದ ಕುಸ್ತಿ ಕಾರವಾರದ ಕುಸ್ತಿ ಕೊಟ್ಟು ಲಕ್ಷ್ಮೀ ಪಾಟೀಲ್ ಹಾಗೂ ಬೆಳಗಾವಿಯ ಕುಸ್ತಿಪಟು ಸ್ವಾತಿ ಪಾಟೀಲ್ ನಡುವೆ ನಡೆದು ಸ್ವಾತಿ ಪಾಟೀಲ್ ಗೆಲುವು ಸಾಧಿಸಿದರು. ಅದರಲ್ಲೂ ನೇಪಾಳದ ದೇವ ಥಾಪಾ ಮತ್ತು ಹಿಮಾಚಲ ಪ್ರದೇಶದ ಅಯೋಧ್ಯೆಯ ಕೇಸರಿ ಕುಸ್ತಿಪಟು ರವಿಕುಮಾರ್ ನಡುವೆ ಕುತೂಹಲಕಾರಿ ಕುಸ್ತಿ ಪಂದ್ಯ ನಡೆದಿತ್ತು. ನೇಪಾಳದ ದೇವತಾಪ ಮನರಂಜನೆ ಮೂಲಕ ರವಿಕುಮಾರ ಅವರನ್ನು ಸೋಲಿಸಿದರು ಅಂದಾಜು 158 ಕುಸ್ತಿಪಟು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.