

ಮಂಡ್ಯ: ಡಾ.ಫ.ಗು.ಹಳಕಟ್ಟಿ ಅವರು ತಮ್ಮ ಭಾಷಾಂತರದ ಮೂಲಕ ಕರ್ನಾಟಕದ ವಚನ ಸಾಹಿತ್ಯವನ್ನು ಇಡೀ ಜಗತ್ತಿಗೆ ಪಸರಿಸಿದ ಮಹಾನ್ ಬರಹಗಾರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಬಣ್ಣಿಸಿದರು.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಡಾ.ಫ.ಗು.ಹಳಕಟ್ಟಿ ಅವರ 145ನೇ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಕನ್ನಡದ ವಚನ, ಸಾಹಿತ್ಯ ಹಾಗೂ ಭಾಷಾಂತರಕ್ಕೆ ಅವರು ನೀಡಿರುವ ಕೊಡುಗೆ ನಿಜಕ್ಕೂ ಅಪಾರ. ಡಾ.ಫ.ಗು.ಹಳಕಟ್ಟಿ ಅವರ ಜೀವನ ಸಂದೇಶ, ತತ್ವ ಹಾಗೂ ಆದರ್ಶಗಳ ಬಗ್ಗೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂಬ ಉದ್ದೇಶದಿಂದ ಜಿಲ್ಲೆಯ ವಿವಿಧ ಶಾಲಾ-ಕಾಲೇಜಿನಲ್ಲಿ ಅವರ ಜಯಂತಿ ಆಚರಣೆಗೆ ಕರೆ ನೀಡಿದ್ದೇವೆ ಎಂದರು.
ವಿವಿಧ ಸಮುದಾಯ ಮುಖಂಡರಾದ ಎಂ.ಎಸ್.ರಾಜಣ್ಣ, ದೇವರಾಜು, ಆನಂದ್, ಸುಧಾ, ಚೇತನ್, ರಾಜಕುಮಾರ್ ಉಪಸ್ಥಿತರಿದ್ದರು.