

ನರಗುಂದ: ವಿಶ್ವ ಸಂಸ್ಕೃತಿಗೆ ವಚನ ಸಂಸ್ಕೃತಿ ದಾರಿ ದೀಪವಾಗಿದೆ. 12ನೇ ಶತಮಾನದ ಬಸವಾದಿ ಶಿವಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಸರ್ವಕಾಲಿಕ ಎಂದು ಉಪನ್ಯಾಸಕ ಪ್ರೊ. ಆರ್.ಎಚ್. ತಿಗಡಿ ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಫ.ಗು. ಹಳಕಟ್ಟಿಯವರ 144ನೇ ಜಯಂತಿ ಅಂಗವಾಗಿ ವಚನ ಸಂರಕ್ಷಣಾ ದಿನ ಹಾಗೂ ಏಕೀಕರಣ ಯೋಧರ ಯಶೋಗಾಥೆ-16ರ ಮಾಲಿಕೆಯಲ್ಲಿ ಅವರು ಮಾತನಾಡಿದರು.
12ನೇ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಪುನರ್‌ಚೈತನ್ಯವನ್ನು ತಂದುಕೊಟ್ಟ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಒಂದು ವಿಶ್ವವಿದ್ಯಾಲಯ ಮಾಡದ ಕೆಲಸವನ್ನು ಏಕಾಂಗಿಯಾಗಿ ಸಾಧಿಸಿದ ಅವರು ಲಿಂಗಾಯತರ ಬಹುದೊಡ್ಡ ಶಕ್ತಿಯಾಗಿದ್ದರು ಎಂದು ನುಡಿದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ವಚನಗಳ ತಾಡೋಲೆಗಳನ್ನು ಹುಡುಕಿ ತಂದು 250 ವಚನಕಾರರ ಸಾಹಿತ್ಯ ಸಾರ್ವಕಾಲಿಕವಾಗುವಲ್ಲಿ ಹಳಕಟ್ಟಿಯವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ನಿವೃತ್ತ ಮುಖ್ಯೋಪಾಧ್ಯಾಯ ವೀರಯ್ಯ ಸಾಲಿಮಠ, ಔಷಧ ವರ್ತಕ ಮಹಾಂತೇಶ ಸಾಲಿಮಠ ಉಪಸ್ಥಿತರಿದ್ದರು. ಶ್ರೀಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ, ಬಸವರಾಜ ಮನೇನಕೊಪ್ಪ ನಿರ್ವಹಿಸಿದರು.