

ಬಸವಕಲ್ಯಾಣ: ಮನೆ ಮಠಗಳ ಗದ್ದುಗೆ ಮೇಲೆ ಪೂಜಿಸಲ್ಪಟ್ಟು ನಶಿಸುವ ಹಂತದಲ್ಲಿದ್ದ ವಚನಗಳು ಸಂಗ್ರಹಿಸಿದ ಡಾ.ಫ.ಗು. ಹಳಕಟ್ಟಿ ಮತ್ತು ಗ್ರಂಥಸ್ಥ ವಚನ ಸಾಹಿತ್ಯವನ್ನು ಪ್ರವಚನದ ಮೂಲಕ ಮನೆ ಮನೆಗೆ ತಲುಪಿಸಿದ ಶ್ರೀ ಲಿಂಗಾನಂದ ಸ್ವಾಮೀಜಿ ಬಸವ ಧರ್ಮದ ಧ್ರುವತಾರೆಗಳು ಎಂದು ಕಾಳಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವಶರಣಪ್ಪ ಮೋತಕಪಳ್ಳಿ ಹೇಳಿದರು.
ನಗರದ ಎಸ್.ಎಸ್. ನಾಗರಾಳೆ ಅವರ ಅರಿವು ಆಚಾರ ಕೇಂದ್ರದಲ್ಲಿ ಕಲ್ಯಾಣ ಮಹಾಮನೆ ಮಹಾಮಠದಿಂದ ಮಂಗಳವಾರ ಸಂಜೆ ಏರ್ಪಡಿಸಿದ್ದ ಡಾ.ಫ.ಗು. ಹಳಕಟ್ಟಿ ಹಾಗೂ ಶ್ರೀ ಲಿಂಗಾನಂದ ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಲಿಂಗಾನಂದ ಸ್ವಾಮೀಜಿ ಜೀವನ ಸಾಧನೆ ಕುರಿತು ಅವರು ಮಾತನಾಡಿದರು.
ಅತ್ಯಂತ ಕಡು ಬಡತನದಲ್ಲಿ ಅಧ್ಯಯನ ಕೈಗೊಂಡ ಲಿಂಗಾನಂದ ಶ್ರೀ ಎಂಎದಲ್ಲಿ ತತ್ವಜ್ಞಾನ ಓದಿದವರು. ೧೯೫೫ರಲ್ಲಿ ಬಸವ ಜಯಂತಿ ದಿನ ಬಸವಣ್ಣನವರ ಸಾಕ್ಷಾತ್ಕಾರ ಪಡೆದು ಅವರ ಸೇವೆಗಾಗಿ ಮನೆ ತೊರೆದು ಸ್ವಯಂ ಸನ್ಯಾಸಿಯಾಗಿ ನಾಡಿನಾದ್ಯಂತ ಸಂಚರಿಸಿ ಪ್ರವಚನಗಳ ಮೂಲಕ ಬಸವತತ್ವ ಪ್ರಚಾರ ಮಾಡಿದರಲ್ಲದೆ ಕನ್ನಡ ಸಾರಸ್ವತ ಲೋಕಕ್ಕೆ ಪ್ರವಚನ ಸಾಹಿತ್ಯ ಪರಿಚಯಿಸಿದ ಕೀರ್ತಿ ಅವರದು ಎಂದು ಬಣ್ಣಿಸಿದರು.
ಡಾ.ಫ.ಗು. ಹಳಕಟ್ಟಿ ಜೀವನ ಸಾಧನೆ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಸ್. ನಾಗರಾಳೆ ಮಾತನಾಡಿ, ಹಳಕಟ್ಟಿ ಬಹುಮುಖ ಪ್ರತಿಭೆಯ ಮಹಾಜ್ಞಾನಿ. ವಚನ ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರ ಸೇವೆ ನಮಗೆಲ್ಲ ಮಾದರಿಯಾಗಿದೆ. ವಚನಗಳ ಸಂಗ್ರಹ ಕಾರ್ಯದಲ್ಲಿ ತೊಡಗಿ ಅವುಗಳ ಮುದ್ರಣಕ್ಕಾಗಿ ತಮ್ಮ ಸ್ವಂತ ಮನೆ ಮಾರಿ ಬಂದ ಹಣದಿಂದ ಹಿತಚಿಂತಕ ಮುದ್ರಣಾಲಯ ತೆರೆದು ವಚನಗಳನ್ನು ಪ್ರಕಟಿಸಿ ಬಸವ ತತ್ವವನ್ನು ಪುನರುತ್ಥಾನಗೊಳಿಸಿದರು. ಹೀಗಾಗಿ ಅವರನ್ನು ವಚನ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿಯ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಧರ್ಮದ ಪ್ರಸಾರಕ್ಕಾಗಿ ಲಿಂಗಾನಂದ ಸ್ವಾಮೀಜಿ ಕಾವಿ ತೊಟ್ಟು ಸ್ವಯಂ ಸನ್ಯಾಸಿಯಾಗಿ ದುಡಿದರೆ, ಡಾ.ಫ.ಗು. ಹಳಕಟ್ಟಿ ಅವರು ಕಾವಿ ತೊಡದೆ ಗೃಹಸ್ಥ ಜಂಗಮನಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕುರಿತು ಯುವ ಮನಸ್ಸುಗಳು ಸರಿಯಾಗಿ ಓದಿ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಅವರ ಕುರಿತು ಅಧ್ಯಯನ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀಬಾಯಿ ಪಾಟೀಲ್ ಮತ್ತು ಜಗನ್ನಾಥ ಪತಂಗೆ ಮಾತನಾಡಿದರು. ವೈದ್ಯ ಡಾ.ಬಸವರಾಜ ಪಂಡಿತ, ನಿವೃತ್ತ ಪ್ರಾಧ್ಯಾಪಕರಾದ ಚನ್ನಪ್ಪ ಪ್ರರ್ತಾಪುರ, ಗಣಪತಿ ಖಾಸ್ತೆ, ಜಯಪ್ರಕಾಶ ಸದಾನಂದೆ, ಚಂದ್ರಕಾಂತ ಗುಂಗೆ, ನಾಗಶೆಟ್ಟಿ ಗೋರ್ಟಾ, ಲಕ್ಷ್ಮಣ ಮೇತ್ರೆ, ಸೋನಾಲಿ ನೀಲಕಂಠೆ, ಗಿರಿಜಾ ಸಿದ್ದಣ್ಣ, ಜಯಶ್ರೀ ಪಾಟೀಲ್, ಕವಿತಾ ಸಜ್ಜನಶೆಟ್ಟಿ, ಶ್ರೀದೇವಿ ಉಜಳಂಬೆ, ರಂಜಿತಾರೆಡ್ಡಿ, ಸರಸ್ವತಿ ಹೊದಲೂರೆ ಇತರರಿದ್ದರು.
ಸುಮಿತ್ರಾದೇವಿ ದಾವಣಗಾವೆ ಸ್ವಾಗತಿಸಿದರು. ಗುರುಲಿಂಗಪ್ಪ ನಿಪ್ಪಾಣಿ ವಂದಿಸಿದರು. ಜಗದೇವಿ ನಿರೂಪಣೆ ಮಾಡಿದರು. ಶ್ರೀ ಲಿಂಗಾನಂದ ಸ್ವಾಮೀಜಿ ಕುರಿತು ಪ್ರಬಂಧ ಮಂಡಿಸಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಡಾ.ಶಿವಶರಣಪ್ಪ ಮೋತಕಪಳ್ಳಿ ಅವರನ್ನು ಸತ್ಕರಿಸಲಾಯಿತು.