

ಹೊನ್ನಾಳಿ: ಸತತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಏಕಾಗ್ರತೆ ಜತೆಗೆ ದೈಹಿಕ ಸದೃಢತೆಯನ್ನು ಕಾಣಬಹುದು. ಹಾಗಾಗಿ ಪಾಲಕರು ಮಕ್ಕಳನ್ನು ಪಠ್ಯಕ್ಕೆ ಸೀಮಿತಗೊಳಿಸದೇ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಲು ಅವಕಾಶ ಮಾಡಿಕೊಡಿ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹೇಳಿದರು.
ಚಿತ್ರದುರ್ಗದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ವಿಭಾಗದ ಪುರುಷ ಹಾಗೂ ಮಹಿಳೆಯರ ನೆಟ್‌ಬಾಲ್ ಕ್ರೀಡಾಕೂಟದಲ್ಲಿ ಚಾಂಪಿಯನ್‌ಶಿಪ್ ಗೆದ್ದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ವಿವಿಧ ಕ್ರೀಡೆಗಳಲ್ಲಿ ಅತೀ ಹೆಚ್ಚು ಪ್ರಶಸ್ತಿ ಹಾಗೂ ಚಾಂಪಿಯನ್‌ಶಿಪ್ ಪಡೆದು ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳು ಅಭಿನಂದನಾರ್ಹರು. ಸತತ ಅಭ್ಯಾಸ, ಕಾಲೇಜಿನ ಕ್ರೀಡಾ ದೈಹಿಕ ನಿರ್ದೇಶಕ ಪ್ರಕಾಶ್ ನಗರಕಟ್ಟಿ ಹಾಗೂ ಎಲ್ಲ ಉಪನ್ಯಾಸಕರ ಇಚ್ಛಾಶಕ್ತಿಯಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.
ದೈಹಿಕ ನಿರ್ದೇಶಕ ಪ್ರಕಾಶ್ ನರಗಟ್ಟಿ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಕಾಲೇಜಿಗೆ ಕ್ರೀಡೆಯಲ್ಲಿ ಹೆಚ್ಚು ಪ್ರಶಸ್ತಿಗಳು ಬಂದಿವೆ. ಇದಕ್ಕೆ ವಿದ್ಯಾರ್ಥಿಗಳ ಸತತ ಅಭ್ಯಾಸ ಕಾರಣ. ಅದರ ಜತೆಗೆ ಶ್ರೀಮಠದ ಶ್ರೀಗಳು, ಪ್ರಾಂಶುಪಾಲರ ಹಾಗೂ ಇತರ ಉಪನ್ಯಾಸಕ ವರ್ಗದವರ ಪ್ರೋತ್ಸಾಹ ಕಾರಣ ಎಂದರು.
ಪ್ರಾಂಶುಪಾಲ ದೊಡ್ಡಗೌಡ್ರು, ಕಚೇರಿ ಅಧೀಕ್ಷಕ ಲೋಕೇಶ್ವರ್, ಸಹಾಯಕ ಪ್ರಾಧ್ಯಾಪಕ ನಾಗೇಶಪ್ಪ, ಗಂಗಾಧರ್ ರೂಗಿ, ಶರತ್, ಸೌಮ್ಯ, ಸಂಗೀತಾ, ರೇಣುಕಾ, ಸತೀಶ್ ಸೇರಿ ಉಪನ್ಯಾಸ ವರ್ಗದವರಿದ್ದರು.