

ಬಣಕಲ್: ಸದಾ ಕಾಡುವ ಕಾಡಿನ ಜಗತ್ತು ತೇಜಸ್ವಿ ಸಾಹಿತ್ಯದ ಸ್ಥಾಯಿ ನೆಲೆಯಾಗಿದೆ ಎಂದು ಲೇಖಕ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಕೋಶ ಓದು ದೇಶ ನೋಡು ಬಳಗ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಏರ್ಪಡಿಸಿದ್ದ ತೇಜಸ್ವಿ ಜತೆ ಯುವಜನರ ಸಾಂಸ್ಕೃತಿಕ ಪಯಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಿಂದ ತೇಜಸ್ವಿ ಬದುಕು, ಬರಹ, ಚಿಂತನೆಗಳು ಯುವ ಸಮುದಾಯವನ್ನು ತಲುಪುತ್ತದೆ. ತೇಜಸ್ವಿ ನೆಲದ ಒಡನಾಟದಿಂದ ಇಲ್ಲಿನ ಭಾಷೆಯನ್ನು ದಕ್ಕಿಸಿಕೊಂಡರು ಎಂದು ಅಭಿಪ್ರಾಯಪಟ್ಟರು.
ಲೇಖಕಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ತೇಜಸ್ವಿ ಅವರು ಪ್ರತಿಯೊಂದು ಸಮಸ್ಯೆಯನ್ನೂ ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ನೋಡುತ್ತಿದ್ದರು. ವೈಜ್ಞಾನಿಕ ಮತ್ತು ವೈಚಾರಿಕವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಡೆ ತೇಜಸ್ವಿ ಚಿಂತನೆಗಳಿದ್ದವು. ಪರಿಸರ ಸಂರಕ್ಷಣೆ ಪ್ರಪಂಚದ ಮೊದಲ ಆದ್ಯತೆಯಾಗಬೇಕು. ಪ್ರಕೃತಿ ಉಳಿದರೆ ಮಾತ್ರ ಮನುಷ್ಯನ ಉಳಿವು ಸಾಧ್ಯ ಎಂಬುದು ತೇಜಸ್ವಿ ನಿಲುವಾಗಿತ್ತು ಎಂದರು.
ಲೇಖಕ ಕೆ.ಪಿ.ಸುರೇಶ್ ಮಾತನಾಡಿ, ತೇಜಸ್ವಿ ಅವರ ಕರ್ವಾಲೊ ಕಾದಂಬರಿ ಬದುಕಿನ ನಿತ್ಯ ರಗಳೆಗಳನ್ನು ಬಿಟ್ಟು ವಿಷಯವೊಂದನ್ನು ಅನ್ವೇಷಿಸುತ್ತ ಸಾಗುವ ಪಯಣದ ಕಥಾನಕ. ಆ ಕಾದಂಬರಿಯಲ್ಲಿ ನೋಡುವುದಕ್ಕಿಂತಲೂ ಕಾಣುವಿಕೆಯ ಮಹತ್ತನ್ನು ತೇಜಸ್ವಿ ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದರು.
ಯುವ ಮುಖಂಡ ಮುನೀರ್ ಕಾಟಿಪಳ್ಳ, ರಾಘವೇಂದ್ರ, ಬಾಪು ದಿನೇಶ್, ಲೇಖಕರಾದ ಪೂರ್ಣೆಶ್ ಮತ್ತಾವರ, ಸತೀಶ್, ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಸಿಬ್ಬಂದಿ ಸತೀಶ್ ಇದ್ದರು.