ಸಾಮೂಹಿಕ ವಿವಾಹದಿಂದ ಸಾಮರಸ್ಯ

MADUVE
ಕಾರಟಗಿ ತಾಲೂಕಿನ ಮರ್ಲಾನಹಳ್ಳಿಯಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 26 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಹೆಬ್ಬಾಳ ಬೃಹನ್ಮಠದ ಡಾ.ನಾಗಭೂಷಣ ಶಿವಾಚಾರ್ಯ, ನಾಗನಕಲ್ ಹಿರೇಮಠದ ವೇ.ಮೂ. ಶರಣಯ್ಯಸ್ವಾಮಿ, ಶ್ರೀನಿವಾಸ ಸೇವಾ ಟ್ರಸ್ಟ್‌ನ ಎಂ.ನರಸಿಂಹರಾವ್, ಎಂ.ಸುಬ್ಬರಾವ್, ಕೃಷ್ಣರಾವ್ ಇತರರಿದ್ದರು.
Published on

ಕಾರಟಗಿ: ಹೆಚ್ಚೆಚ್ಚು ಸಾಮೂಹಿಕ ವಿವಾಹಗಳು ನಡೆಯುವುದರಿಂದ ಸಮಾಜದಲ್ಲಿ ಸಾಮರಸ್ಯ ಮೂಡಲು ಸಹಕಾರಿಯಾಗಲಿದೆ ಎಂದು ಹೆಬ್ಬಾಳ ಬೃಹನ್ಮಠದ ಡಾ.ನಾಗಭೂಷಣ ಶಿವಾಚಾರ್ಯರು ಹೇಳಿದರು.

ತಾಲೂಕಿನ ಮರ್ಲಾನಹಳ್ಳಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸ ಸೇವಾ ಟ್ರಸ್ಟ್ 37ನೇ ವರ್ಷದ ಶ್ರೀ ವೆಂಕಟೇಶ್ವರ ಕಲ್ಯಾಣೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ದೇವಸ್ಥಾನಗಳು, ಸಂಘ-ಸಂಸ್ಥೆಗಳು ನಡೆಸುವ ಉಚಿತ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸುವ ಜತೆಗೆ ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಿದಂತಾಗುತ್ತದೆ. ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಸೌಹಾರ್ದತೆ ಮೂಡಲಿದೆ. ಇಂತಹ ವಿವಾಹಗಳಿಗೆ ಸಮಾಜದ ಅನೇಕರು ವಿವಿಧ ರೀತಿಯಲ್ಲಿ ದಾನ ಮಾಡುತ್ತಾರೆ. ಅವರಿವರೆನ್ನದೇ ಎಲ್ಲರೂ ಒಗ್ಗೂಡಿ ಕಲ್ಯಾಣ ಕಾರ್ಯಕ್ಕೆ ಶ್ರಮಿಸುವುದು ದೇವರ ವೇವೆಗೆ ಸಮಾನ. ಇದು ಎಲ್ಲರಲ್ಲೂ ಸರಳತೆ ಮತ್ತು ಬಾಂಧವ್ಯ ವೃದ್ಧಿಸಲಿದೆ. ನವದಂಪತಿಗಳು ಜೀವನದಲ್ಲಿ ಕಷ್ಟ-ಸುಖಃ ಏನೇ ಬಂದರೂ ಸಮಾನವಾಗಿ ಸ್ವೀಕರಿಸಿ ಬದುಕು ಸಾಗಿಸಬೇಕು. ನಿಮ್ಮ ಬದುಕೇ ಇವರ ಸತ್ಕಾರ್ಯಕ್ಕೆ ಕೀರ್ತಿ ತರುವಂತಿರಬೇಕು ಎಂದು ತಿಳಿಸಿದರು.

ಶ್ರೀ ವೇಂಕಟೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 26 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರಟಗಿ, ಹಳೇಜೂರಟಗಿ, ಹೊಸಜೂರಟಗಿ, ಹುಳ್ಕಿಹಾಳ, ಯರಡೋಣಾ, ಕಿಂದಿಕ್ಯಾಂಪ್, ಹುಳ್ಕಿಹಾಳಕ್ಯಾಂಪ್ ಇತರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net