ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾಶ್ಯಪ್ ಪುಸ್ತಕ ವಿತರಣೆ

WhatsApp Image 2023-12-22 at 7.51.10 PM (1)
Published on

ಗದಗ: ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷಾ ಅಭ್ಯಾಸಕ್ಕೆ ಸಹಕಾರಿಯಾಗುವ ಮಾದರಿ ಮತ್ತು ಉತ್ತರಸಹಿತ ಬೋರ್ಡ ಪ್ರಶ್ನೆ ಪತ್ರಿಕೆಗಳುಳ್ಳ ಕಾಶ್ಯಪ್ ಪುಸ್ತಕವನ್ನು ಉಚಿತವಾಗಿ ವಿತರಿಸುತ್ತಿದ್ದೇವೆ ಎಂದು  ಡಾ. ಮಹೇಶ ನಾಲವಾಡ ಪೌಂಡೇಶನ್‌ನ ಅಧ್ಯಕ್ಷ ಡಾ. ಮಹೇಶ ನಾಲವಾಡ ಹೇಳಿದರು.
ನಗರದ ಸಿದ್ಧಲಿಂಗ ಸರಕಾರಿ ಪ್ರೌಢ ಶಾಲೆಯ ೧೭೭ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದರು.
ಸರಕಾರ ಮಕ್ಕಳ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಅದೇ ರೀತಿ ನಮ್ಮ ಸಂಸ್ಥೆಯು ಮಕ್ಕಳ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಪರಿಣಾಮ ತರಲು ಸಹಕಾರಿಯಾಗಲೆಂದು ಶಿಕ್ಷಣ ತಜ್ಞರ ಸಲಹೆ ಮೂಲಕ ತಯಾರಿಸಲಾಗಿದ್ದು ಇದರ ಸದುಪಯೋಗ ಎಲ್ಲ ಮಕ್ಕಳಿಗೂ ಸಿಗಲಿ ಎಂದು ಹೇಳಿದರು.
೧೦ನೇ ತರಗತಿ ಎನ್ನುವುದು ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟವಾಗಿದ್ದು, ವಿದ್ಯಾರ್ಥಿ ಮತ್ತು ಪಾಲಕರಲ್ಲಿರುವ ಕುತೂಹಲ ಹಾಗೂ ಆತಂಕ ದೂರಗೊಳಿಸುವ ನಿಟ್ಟಿನಲ್ಲಿ ಈ ಪುಸ್ತಕ ಉತ್ತಮ ಸಹಕಾರ ನೀಡಲಿದೆ. ಉತ್ತರ ಸಹಿತ ಮಾದರಿ ಪ್ರಶ್ನೆ ಪತ್ರಿಕೆಗಳು ಸಹಜವಾಗಿ ವಿದ್ಯಾರ್ಥಿ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧಗೊಳಿಸಲಾಗಿದೆ ಎಂದರು.
ಎಂ.ಎ. ರಡ್ಡೇರ ಡಿಡಿಪಿಐ ಗದಗ ಅವರು ಮಾತನಾಡಿ, ಈ ಪುಸ್ತಕದ ಸದುಪಯೋಗ ಪಡೆಯುವಲ್ಲಿ ಮಕ್ಕಳಿಗೆ ಸಹಾಯಕವಾಗುವಂತೆ ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ. ಮಕ್ಕಳು ಹೇಗೆ ಓದಬೇಕು ಎಂದರೆ ಓದಿ ಸಂಗ್ರಹಿಸಿ ನಂತರ ತಿಳಿದುಕೊಂಡು ಮತ್ತೆ ಅದನ್ನು ಪುನಃ ಪ್ರಕಟಿಸಬೇಕು. ಇದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುವುದು. ಅದೇ ರೀತಿ ಶಿಕ್ಷಕರು ವಿಷಯಗಳನ್ನು ಮಕ್ಕಳಿಗೆ ಪುನಃ ಪುನಃ ಓದಿಸುವುದರಿಂದ ಪರೀಕ್ಷಾ ಫಲಿತಾಂಶವು ಉತ್ತಮವಾಗುವುದರಲ್ಲಿ ಸಂಶಯವಿಲ್ಲಾ ಎಂದು ಹೇಳಿದರು.
ಕಲ್ಲಯ್ಯಜ್ಜನವರು ಮಾತನಾಡಿ ಮಹೇಶ ನಾಲವಾಡ ಪೌಂಡೇಶನ್‌ನವರು ೪೫ ಸಾವಿರ ಪುಸ್ತಕಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿ, ಮಕ್ಕಳು ಇದರ ಸದುಪಯೋಗ ಪಡೆಯಲಿ ಎಂದು ಆಶೀರ್ವಚನ ನೀಡಿದರು.
ಬಸವರಾಜ ಧಾರವಾಡ ಮಾತನಾಡಿ ಈ ಪುಸ್ತಕವು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತಯಾರಾಗಿ ಉತ್ತಮ ಫಲಿತಾಂಶ ತರುವಲ್ಲಿ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಸಣ್ಣ ಗಾಣಿಗೇರ, ಅಖಿಲ ಹಲಗತ್ತಿ, ರಾಜೇಂದ್ರ ಹೊಂಗಲ್ ಹಾಗೂ ಶಾಲೆಯ ಮುಖೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ, ಮಕ್ಕಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net