

ಕೆ.ಆರ್.ನಗರ: ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿಗಳಾಗಿ ಡಾ.ಮಹದೇವಸ್ವಾಮಿ ಅವರು ತಮ್ಮ ಅಧಿಕಾರವಧಿಯಲ್ಲಿ ಕಂಡುಹಿಡಿದ ತಂಬಾಕಿನ ಹಲವಾರು ತಳಿಗಳು ಅಧಿಕ ಇಳುವರಿ ತರಲು ಮತ್ತು ರೋಗಭಾದೆಯಿಂದ ಮುಕ್ತವಾಗಿರಲು ಸಹಕಾರಿಯಾಯಿತು ಎಂದು ಪ್ರಾದೇಶಿಕ ನಿವೃತ್ತ ವ್ಯವಸ್ಥಾಪಕ ಅಧಿಕಾರಿ ಪಾಟೀಲ್ ತಿಳಿಸಿದರು.
ಪಟ್ಟಣದ ನವನಗರ ಅರ್ಬನ್ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಹುಣಸೂರು ತಂಬಾಕು ಸಂಶೋಧನಾ ಕೇಂದ್ರದ ವಿಜ್ಞಾನಿಗಳಾಗಿ ನಿವೃತ್ತಿ ಹೊಂದಿದ ಡಾ.ಮಹದೇವಸ್ವಾಮಿ ಅವರಿಗೆ ಬುಧವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ಒಬ್ಬ ಅತ್ಯುತ್ತಮ ವಿಜ್ಞಾನಿ ಹುಣಸೂರಿನ ತಂಬಾಕು ಸಂಶೋಧನಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ. ನಿವೃತ್ತಿಯ ನಂತರ ರೈತರ ಬಾಳಿಗೆ ಅನುಕೂಲವಾಗುವ ಹಲವಾರು ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಇಡಿ ರಾಜ್ಯ, ರಾಷ್ಟ್ರಕ್ಕೆ ಒಳ್ಳೆಯ ಹೆಸರನ್ನು ತರಲಿ ಎಂದು ಆಶಿಸಿದರು.
ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿ, ಒಣ ಭೂಮಿಯಲ್ಲಿ ಅತ್ಯುತ್ತಮ ಬೇಸಾಯ ಪದ್ಧತಿಯ ಬಗ್ಗೆ ಹಲವಾರು ಸಂಶೋಧನೆಗಳನ್ನು ನಡೆಸುತ್ತಿರುವ ಇಂತಹ ವಿಜ್ಞಾನಿಗಳು ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜ್ಞಾನಿ ಡಾ.ಮಹದೇವಸ್ವಾಮಿ, ರೈತರು ತಂಬಾಕು ಬೆಳೆಗಳಿಗೆ ಸಮ ಪ್ರಮಾಣದಲ್ಲಿ ರಸಗೊಬ್ಬರ ಹಾಕುವಲ್ಲಿ ವಿಫಲರಾಗುತ್ತಿದ್ದು, ಎಲ್ಲ ಅಂಶಗಳು ಒಂದೇ ರಸಗೊಬ್ಬರದಲ್ಲಿ ಬರುವಂತೆ ರಸಗೊಬ್ಬರ ತಯಾರಿಸುವ ಆಸೆ ಈಡೇರಲಿಲ್ಲ, ಮುಂದಿನ ದಿನಗಳಲ್ಲಿ ಆ ಸಂಶೋಧನೆ ನಡೆಯಲಿದೆ ಎಂದು ತಿಳಿಸಿದರು.
ತಂಬಾಕು ನಿವೃತ್ತ ಅಧಿಕಾರಿ ಕೆ.ಎನ್.ದಿನೇಶ್, ವರ್ತಕರಾದ ರಾವಂದೂರ್ ಪ್ರಕಾಶ್, ಕೂಸಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್, ತಂಬಾಕು ಹರಾಜು ಅಧೀಕ್ಷಕ ಧನರಾಜ್, ತಂಬಾಕು ಬೆಳೆಗಾರರಾದ ಕಲ್ಲಳ್ಳಿ ಶಿವಣ್ಣ, ಮರೂರು ಚಂದ್ರಣ್ಣ, ಶಿವಬಸಪ್ಪ, ಉದ್ಯಮಿ ಅಶೋಕ್, ಶಿಕ್ಷಕ ಪುರುಷೋತ್ತಮ್ ಮತ್ತಿತರರು ಹಾಜರಿದ್ದರು.