ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಕರುನಾಡ ಕರ್ನಾಟಕ ರತ್ನ ಪ್ರಶಸ್ತಿ

tttttttttttttt
Published on



ಮಂಗಳೂರು : ಕರ್ನಾಟಕ ಮಾಧ್ಯಮ ಸಹಕಾರ ಹಾಗೂ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ , ಬೆಂಗಳೂರು ಇದರ ವತಿಯಿಂದ ನೀಡಲಾದ ಪ್ರತಿಷ್ಠಿತ ‘ಕರುನಾಡ ಕರ್ನಾಟಕ ರತ್ನ ’ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸೋಮವಾರ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.
ಸಹಕಾರ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಅನುಪಮ ಸೇವೆಯನ್ನು ಗುರುತಿಸಿ ಕರುನಾಡ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ವಿಶ್ರಾಂತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ನೀಡಿ ಗೌರವಿಸಿದರು. ನಿವೃತ್ತ ನ್ಯಾಯಮೂರ್ತಿ ನಿಟ್ಟೆ ಸಂತೋಷ್ ಹೆಗ್ಡೆ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಜಿ.ಆರ್.ವಿಶ್ವನಾಥ್ , ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ.ಡಾ. ಎಸ್. ಚಂದ್ರಶೇಖರ ಶೆಟ್ಟಿ, ವಿಶ್ರಾಂತ ಪೊಲೀಸ್ ಮಹಾನಿರ್ದೇಶಕ ಬಿ.ಎನ್. ಗರುಡಚಾರ್ ಹಾಗೂ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ಸ್ಥಾಪಕ ಅಧ್ಯಕ್ಷ ಶ್ರಾವಣ ಲಕ್ಷ್ಮಣ್ ಉಪಸ್ಥಿತರಿದ್ದರು.
*ಸಹಕಾರ ಕ್ಷೇತ್ರದಲ್ಲಿ ಸಮಾಜ ಸೇವೆ
ಎಸ್‌ಸಿಡಿಸಿಸಿ ಅಧ್ಯಕ್ಷರಾಗಿ ಸಾರ್ಥಕ , ಪ್ರಾಮಾಣಿಕ ಸೇವೆಯನ್ನು ಕಳೆದ 29 ವರ್ಷಗಳಿಂದ ನೀಡುತ್ತಿರುವ ಡಾ.ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಈ ಬ್ಯಾಂಕ್ ಅತ್ಯುನ್ನತ ಮಟ್ಟಕ್ಕೇರಿಸಿ ಜನಸ್ನೇಹಿ ಬ್ಯಾಂಕನ್ನಾಗಿ ರೂಪಿಸಿದ್ದಾರೆ . ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿದ ಇವರು ಸಹಕಾರಿ ರಂಗಕ್ಕೆ ಹೊಸ ಆಯಾಮವನ್ನು ನೀಡಿದವರು. ಕೋರ್ ಬ್ಯಾಂಕಿಂಗ್‌ನಂತಹ ಉತ್ಕೃಷ್ಟ ತಂತ್ರಜ್ಞಾನವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರದ್ದು. ಸುಸಜ್ಜಿತ ವಾಹನದಲ್ಲಿ ಮೊಬೈಲ್ ಬ್ಯಾಂಕ್ ಸೇವೆಯನ್ನು ರಾಜ್ಯದ ಸಹಕಾರಿ ರಂಗದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಕೂಡ ಇವರದ್ದು.
ಸಹಕಾರ, ಸಾಮಾಜಿಕ, ಬ್ಯಾಂಕಿಂಗ್, ಧಾರ್ಮಿಕ... ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧಕರಾಗಿ, ನವೋದಯ ಸ್ವ ಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ ರಾಜೇಂದ್ರ ಕುಮಾರ್ ಅವರು ರಾಜ್ಯದ ಧೀಮಂತ ಸಹಕಾರಿ ನಾಯಕರಲ್ಲಿ ಒಬ್ಬರು.ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನವೋದಯ ಸ್ವಸಹಾಯ ಸಂಘಗಳ ಮೂಲಕ ನೀಡಿ , ಆರ್ಥಿಕ ಚೈತನ್ಯವನ್ನು ತುಂಬಿದ್ದಾರೆ. ಎರಡನೇ ಬಾರಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರೂ ಆಗಿರುವ ಇವರು ಸಹಕಾರಿ ಬ್ಯಾಂಕಿಂಗ್ ಹಾಗೂ ಸಾಮಾಜಿಕ ರಂಗದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ್ದಾರೆ. ನಾಲ್ಕು ದಶಕಗಳ ಕಾಲ ನಿರಂತರವಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಸರ್ವಧರ್ಮಿಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net