

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಎಂ.ಎಂ. ಕಲಬುರ್ಗಿ ಸಮಗ್ರ ಸಂಶೋಧಕರಾಗಿದ್ದರು. ಕನ್ನಡ ಪರಂಪರೆಗೆ ಅನೇಕರು ಕೊಡುಗೆ ನೀಡಿದ್ದಾರೆ. ಆ ಸಾಲಿನಲ್ಲಿ ಎಂ.ಎಂ. ಕಲಬುರ್ಗಿ ಸೇರುತ್ತಾರೆ. ಛಂದಸ್ಸು, ವ್ಯಾಕರಣ ಭಾಷಾ ನೆಲೆಯಲ್ಲಿ ಹಳಗನ್ನಡ ಮಹತ್ವ ಪಡೆದಿದೆ. ಅವರ ಲೇಖನದುದ್ದಕ್ಕೂ ಬಂಡಾಯದ ನೆಲೆಗಳನ್ನು ಕಾಣುತ್ತೇವೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಹೇಳಿದರು.
ನಗರದ ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ನಗರದ ಕೆಎಲ್ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಳಗನ್ನಡ ಓದು ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಡಾ. ವೈ.ಎಂ. ಯಾಕೊಳ್ಳಿ ಮಾತನಾಡಿ, ಹಳಗನ್ನಡ ಕಾವ್ಯ ಯಾಕೆ ಓದಬೇಕು? ಎನ್ನುವುದು ಕೇಶಿರಾಜನ ಕವಿ ರಾಜಮಾರ್ಗದಲ್ಲಿ ಕಂಡುಬರುತ್ತದೆ. ಪ್ರಾಚಿನ ಕನ್ನಡ ಹಾಗೂ ಹಳಗನ್ನಡ ನಮಗೆ ಏನು ಹೇಳಿಕೊಡುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಹೇಳದೆ ಹೋದರೆ ಕಲಬುಗಿರ್ಯವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಕೆಎಲ್ಇ ಸಂಸ್ಥೆ ಬೆಳಗಾವಿ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಡಾ. ವಿ.ಐ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಬುರ್ಗಿ ಅವರ ಬರಹ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಅವರು ಮಹಾನ್ ವಿದ್ವಾಂಸರಾಗಿದ್ದರು. ಇಂದಿನ ಪ್ರಾಧ್ಯಾಪಕರು ಪಠ್ಯಕ್ಕೆ ಸೀಮಿತವಾಗದೆ, ನಿರಂತರ ಓದುವಿಕೆ ಬೆಳೆಸಿಕೊಂಡು ಪಾಠದ ಆಶಯ, ಉದ್ದೇಶ ಏನು ಎಂದು ತಿಳಿಸಬೇಕು ಎಂದರು.
ಶಂಕರಲಿಂಗ ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ. ವೀಣಾ ಹೂಗಾರ, ಪ್ರಾಚಾರ್ಯೆ ಡಾ. ನೀಲಕ್ಕ ಪಾಟೀಲ, ಶ್ರೀದೇವಿ ಸಂಗೊಳ್ಳಿ, ಶಶಿಧರ ತೋಡಕರ, ಇತರರು ಇದ್ದರು.
ಕುಮಾರ ಬೇಕ್ಕೇರಿ ಸ್ವಾಗತಿಸಿದರು. ಡಾ. ಬಾಳಣ್ಣ ಶೀಗೀಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಾಬು ಬೆಣ್ಣಿ ನಿರೂಪಿಸಿದರು. ಡಾ. ರೆಹಮಾನ್ ಗೊರಜನಾಳ ವಂದಿಸಿದರು.