ಡಾ.ಎಚ್.ಕೃಷ್ಣ ಆಹಾರ ಆಯೋಗದ ಅಧ್ಯಕ್ಷರಾಗಿ ನೇಮಕ: ಮಂಡ್ಯ ಜಿಲ್ಲೆಗೆ ಒಲಿದ ಉನ್ನತ ಅಧಿಕಾರ

Dr.Krishna is the new chairman of Food Commission mandya
Published on

ಮಂಡ್ಯ: ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾಗಿ ಡಾ.ಎಚ್.ಕೃಷ್ಣ ನೇಮಕವಾಗಿದ್ದು, ಬೆಂಗಳೂರಿನ ಕಚೇರಿಯಲ್ಲಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕೃಷಿ, ಸಮಾಜ ಕಲ್ಯಾಣ ಸೇರಿದಂತೆ 17 ಇಲಾಖೆ ಆಯೋಗದಡಿ ಕೆಲಸ ನಿರ್ವಹಿಸಲಿವೆ. ಅಂತೆಯೇ ಐದು ವರ್ಷದ ಅಧ್ಯಕ್ಷರ ಅಧಿಕಾರವಿದ್ದು, ಸರ್ಕಾರದಿಂದ ಹಲವು ಸೌಲಭ್ಯ ಸಿಗಲಿದೆ. ಪ್ರಮುಖವಾಗಿ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ.

ಕಾಂಗ್ರೆಸ್‌ನಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಕೃಷ್ಣ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದರು. ಮಾತ್ರವಲ್ಲದೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಜತೆಗೆ ಸಾಮಾಜಿಕ ಚಟುವಟಿಕೆಯಿಂದ ಗಮನಸೆಳೆದಿದ್ದರು. ಆದರೆ ವರಿಷ್ಠರ ಸೂಚನೆ ಮೇರೆಗೆ ಸ್ಪರ್ಧಾ ಕಣದಿಂದ ಹಿಂದೆ ಸರಿದರು. ಇದಾದ ಬಳಿಕ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈಗ ಆಹಾರ ಆಯೋಗದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಆಹಾರ ಆಯೋಗದ ನೂತನ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರನ್ನು ಮಂಡ್ಯದಲ್ಲಿ ಮೈಸೂರು ಮಿತ್ರ ಫೌಂಡೇಷನ್ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಅಭಿನಂದಿಸಿದರು. ಕೆ.ಆರ್.ಪೇಟೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಅಗಸನಹಳ್ಳಿ ಗೋವಿಂದರಾಜು, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net