

ಗಂಗಾವತಿ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ 60ರ ದಶಕದಲ್ಲಿ ಕಲ್ಮಠದ ಲಿಂ.ಶ್ರೀ ಚನ್ನಬಸವ ಸ್ವಾಮಿಗಳು ಶ್ರಮಿಸಿದ್ದು, ಡಿ.6ರಂದು ಶ್ರೀಗಳ ಸ್ಮರಣೆಯಲ್ಲಿ ಸಂಸ್ಥಾಪನೆ ದಿನ ಆಚರಿಸಲಾಗುವುದು ಎಂದು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.
ನಗರದ ಜಿಎಚ್‌ಎನ್ ಪದವಿ ಕಾಲೇಜಿನಲ್ಲಿ ಶ್ರೀಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪನೆ ದಿನ ನಿಮಿತ್ತ ಸೋಮವಾರ ನಡೆದ ಆಡಳಿತ ಮಂಡಳಿ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದರು. ಶ್ರೀಗಳ ದೂರದೃಷ್ಟಿಲವಾಗಿ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸುವರ್ಣ ಮಹೋತ್ಸವ ಆಚರಿಸಿದೆ.
ಬಡ ಮಕ್ಕಳಿಗೆ ಎಲ್‌ಕೆಜಿಯಿಂದ ಪಿಜಿವರೆಗೆ ಒಂದೇ ಸೂರಿನಡಿ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಕಲ್ಮಠದ 15 ಎಕರೆ ಭೂಮಿ ವಿದ್ಯಾವರ್ಧಕ ಸಂಘಕ್ಕೆ ನೀಡಲಾಗಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ಕಲಿಕಾ ಸಾಮಗ್ರಿ ವಿತರಿಸಲಾಗಿದೆ. ಕನ್ನಡ, ಆಂಗ್ಲ ಮಾಧ್ಯಮ ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆ, ಪಿಯು, ಪದವಿ ಕಾಲೇಜು, ಸಹಕಾರಿ ಬ್ಯಾಂಕ್ ಮತ್ತು ಗ್ರಂಥಾಲಯ ಸೇರಿ 18 ಸಂಸ್ಥೆಗಳಿದ್ದು, ಪ್ರಸಕ್ತ ವರ್ಷದಿಂದ ಸ್ನಾತಕೋತ್ತರ ಆರಂಭಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಣಕ್ಕಾಗಿ ಮೆದಕಿನಾಳ್, ಹುಳ್ಕಿಹಾಳ್, ಹೊಸಳ್ಳಿ ಸೇರಿ ವಿವಿಧೆಡೆ ಕಲ್ಮಠದ ಭೂಮಿ ನೀಡಲಾಗಿದೆ. ಡಿ.6ರ ಶ್ರೀಗಳ ಪುಣ್ಯಸ್ಮರಣೋತ್ಸವನ್ನು ಪ್ರಸಕ್ತ ವರ್ಷದಿಂದ ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುವುದು ಎಂದರು.
ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ಸಂಸ್ಥಾಪನೆ ದಿನ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ಗಂಗಮ್ಮ ಶ್ರೀ ಗುರುಪಾದಗೌಡ ಮಾ.ಪಾಟೀಲ್ ನೂತನ ನಾಮಕರಣ, ಹಾನಗಲ್ ಶ್ರೀ ಕುಮಾರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಹೊಸ ಕಟ್ಟಡದ ಭೂಮಿಪೂಜೆ, ಎಂಕಾಂ ಹೊಸ ಕೋರ್ಸ್ ಆರಂಭ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಸಿದ್ದಾಪುರದ ವಿಭೂತಿ ಗುಂಡಪ್ಪಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ವಿವಿಧ ಮಠಾಧೀಶರು, ಹಾಲಿ, ಮಾಜಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಸಂಸದ ಎಸ್.ಶಿವರಾಮನಗೌಡ, ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಕಾರ್ಯದರ್ಶಿ ಶರಣೇಗೌಡ ಜಿ.ಮಾಲಿ ಪಾಟೀಲ್, ಕೋಶಾಧ್ಯಕ್ಷ ಸುರೇಶ ಸಿಂಗನಾಳ್, ನಿರ್ದೇಶಕರಾದ ಕಳಕನಗೌಡ ಪಾಟೀಲ್, ಗುಂಜಹಳ್ಳಿ ರಾಜಶೇಖರಪ್ಪ, ಜಿ.ತಿಪ್ಪೇರುದ್ರೇಶ,ಲಿಂಗಪ್ಪ ಕಮತಗಿ, ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಪ್ರೊ.ಬಸವರಾಜ ಅಯೋಧ್ಯಾ, ವಿ.ಜಿ.ಯಾವಗಲ್, ಪ್ರೊ.ರವಿ ಎನ್. ಚವ್ಹಾಣ, ಉಪ ಪ್ರಾಚಾರ್ಯ ಲಕ್ಷ್ಮೀಕಾಂತ ಹೇರೂರು, ಮುಖ್ಯಶಿಕ್ಷಕ ಪ್ರಕಾಶ ಗೌಡ ಪಾಟೀಲ್ ಇತರರಿದ್ದರು.