

ಗಂಗಾವತಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕೌಶಲ ನಿರೀಕ್ಷಿಸುತ್ತಿದ್ದು, ಕೌಶಲ ರಹಿತ ಪದವಿ ಶಿಕ್ಷಣಕ್ಕೆ ಬೆಲೆಯೂ ಇಲ್ಲ, ನೌಕರಿಯೂ ಸಿಗಲ್ಲ ಎಂದು ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.
ನಗರದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದಿಂದ ಆರಂಭಿಸಿರುವ ವೃತ್ತಿ ಕೌಶಲ ತರಬೇತಿ ಕೇಂದ್ರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಪದವಿ ಪಡೆಯುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿರುದ್ಯೋಗ ಸಮಸ್ಯೆ ವಿಪರೀತವಾಗಿದೆ. ಉದ್ಯೋಗಾವಕಾಶ ಹೆಚ್ಚುವ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಕೌಶಲ ಆಧಾರಿತ ಶಿಕ್ಷಣಕ್ಕೆ ಮಹತ್ವವಿದ್ದು, ಉದ್ಯೋಗಾಂಕ್ಷಿಗಳು ಕೌಶಲದತ್ತ ಗಮನಹರಿಸಬೇಕಿದೆ. ಪದವಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೌಶಲ ತರಬೇತಿ ಕೇಂದ್ರ ತೆರೆಯಲಾಗಿದೆ ಎಂದರು.
ಮಾಜಿ ಸಂಸದ, ಸಂಘದ ನಿರ್ದೇಶಕ ಎಸ್. ಶಿವರಾಮನಗೌಡ ಮಾತನಾಡಿ, ಸಂಸ್ಥೆ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳ ಜತೆಗೆ ಜಿಲ್ಲೆಯ ಇತರ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ಕಲ್ಪಿಸಲಾಗುತ್ತಿದೆ. 50ಲಕ್ಷ ರೂ.ಮೌಲ್ಯದ ಕೌಶಲ ಘಟಕ ರೂಪಿಸಲಾಗಿದೆ ಎಂದರು. ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ ಪ್ಲಸ್ ವತ್ತಿ ತರಬೇತಿ ಕೇಂದ್ರದ ಸಹಯೋಗದೊಂದಿಗೆ ತರಬೇತಿ ಕೇಂದ್ರ ಆರಂಭಿಸಲಾಯಿತು.
ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್, ಜಿಎಚ್‌ಎನ್ ಕಾಲೇಜಿನ ಪ್ರಾಚಾರ್ಯ ಪ್ರೊ.ಜಿ. ಬಸವರಾಜ ಅಯೋದ್ಯಾ, ವತ್ತಿ ತರಬೇತಿ ಕೇಂದ್ರದ ಜಿಲ್ಲಾ ಉಸ್ತುವಾರಿ ಎಚ್.ನಾಗರಾಜ, ತರಬೇತುದಾರರಾದ ಸೂರಣ್ಣ, ನಾಗರಾಜ್ ಕಿನ್ನಾಳ, ಸಂತೋಷಬಾಬು ಇತರರಿದ್ದರು.