ಡಾ.ಕೋರೆ ಕಾರ್ಯ ಅವಿಸ್ಮರಣೀಯ

13Anand4
ನಾಗನೂರ ಗ್ರಾಮದಲ್ಲಿ ಕೆಎಲ್‌ಇ 109ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮತ್ತಿಕೊಪ್ಪದ ಐಸಿಎಆರ್- ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಹಿಂಗಾರು ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಜರುಗಿತು. ಡಾ. ಮಂಜುನಾಥ ಚೌರಡ್ಡಿ , ಡಾ.ಎಸ್.ಎಸ್.ಹಿರೇಮಠ, ಬಸವ್ವ ಶಿರಸಂಗಿ, ಶೋಭಾ ಪಾಟೀಲ, ಚಂದ್ರಮೌಳಿ ತಿಗಡಿ ಇತರರು ಇದ್ದರು.
Published on

ಬೆಳಗಾವಿ: ಒಂದು ಸಂಸ್ಥೆ ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಆದರೆ, ಕಳೆದ 35 ವರ್ಷಗಳಲ್ಲಿ 310 ಸಂಸ್ಥೆಗಳನ್ನು ಹುಟ್ಟು ಹಾಕಿ ಜಗತ್ತಿನಾದ್ಯಂತ ಕೆಎಲ್‌ಇ ಸಂಸ್ಥೆಯ ಹೆಸರು ರಾರಾಜಿಸುವಂತೆ ಮಾಡಿದ ಡಾ.ಪ್ರಭಾಕರ ಕೋರೆ ಅವರ ಕಾರ್ಯ ಅವಿಸ್ಮರಣೀಯವಾಗಿದೆ ಎಂದು ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದಲ್ಲಿ ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಹಿಂಗಾರು ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೇಶ್ವೆಗಳ ಆಡಳಿತದಲ್ಲಿ ಕನ್ನಡದ ನೆಲ ಹದಗೊಳಿಸಿದ ಸಪ್ತಋಷಿಗಳು ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆ ಹುಟ್ಟುಹಾಕಿದರು. ಗಡಿಯಲ್ಲಿ ಕನ್ನಡ ಗಟ್ಟಿಗೊಳ್ಳಲು ಕೆಎಲ್‌ಇ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದರು.

ಕೇಂದ್ರದ ವಿಜ್ಞಾನಿ ಡಾ. ಎಸ್.ಎಸ್.ಹಿರೇಮಠ ಮಾತನಾಡಿ, ಹಿಂಗಾರು ಬೆಳೆಗಳಲ್ಲಿ ಬರುವ ರೋಗಗಳ ಗುರುತಿಸುವಿಕೆ ಮತ್ತು ಸಮಗ್ರ ನಿರ್ವಹಣಾ ಕ್ರಮಗಳ ಬಗ್ಗೆ ವಿವರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವ್ವ ಶಿರಸಂಗಿ ಅಧ್ಯಕ್ಷತೆ ವಹಿಸಿದ್ದರು. ಶೋಭಾ ಪಾಟೀಲ, ಚಂದ್ರಮೌಳಿ ತಿಗಡಿ ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net